ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇಂದು ಸಿಡಿ ಲೇಡಿ ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ವಕೀಲರ ಮೂಲಕ ದೂರನ್ನೂ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಡಿ ಲೇಡಿ ಪರ ವಕೀಲ ಜಗದೀಶ್ ಮಹಾದೇವನ್ ಮಾತನಾಡಿದ್ದು, ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರುತ್ತಾರೆ ಎಂದು ತಿಳಿಸಿದ್ದಾರೆ.
ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದರೆ ಸಾಕು ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಹೊರಗೆ ಬರುತ್ತಾರೆ. ಆದರೆ ಇಂದು ಪೊಲೀಸ್ ಆಯುಕ್ತರು ಭರವಸೆ ನೀಡಬೇಕು. ಯುವತಿ ಎರಡ್ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಿದರೂ ಗೃಹ ಇಲಾಖೆ, ಎಸ್‍ಐಟಿ, ಪೊಲೀಸರು ಅವರ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ. ಸಿಡಿ ಪ್ರಕರಣದ ಸಂಪೂರ್ಣ ವಿವರಗಳನ್ನು ಯುವತಿ ನೀಡಿದ್ದಾರೆ. ಅಲ್ಲದೆ ಎರಡು ಪುಟದ ದೂರನ್ನು ಸಹ ಕೈಯ್ಯಲ್ಲಿ ಬರೆದು ಕೊಟ್ಟಿದ್ದಾರೆ. ಇಂದು ನಮ್ಮ ವಕೀಲರ ತಂಡ ಅದನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ
ಎರಡು ಪುಟಗಳ ದೂರು ನೀಡಿದ್ದು, ಇದರಲ್ಲಿ ಜಾರಕಿಹೊಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಭದ್ರತೆ ದೃಷ್ಟಿಯಿಂದ ಯುವತಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದಾರೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಆಕೆಯ ದೂರು ಸ್ಟ್ರಾಂಗ್ ಆಗಿದೆ. ಅತ್ಯಾಚಾರ ಕೇಸ್ ದಾಖಲಾಗುತ್ತೋ ಕಾದು ನೋಡಬೇಕಿದೆ. ಅಧಿಕಾರ ದುರ್ಬಳಕೆ ಪ್ರಕರಣವಂತೂ ದಾಖಲಾಗುತ್ತದೆ. ಯಾವ ರೀತಿಯ ಪ್ರಕರಣ ದಾಖಲಾಗುತ್ತೆ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಜಗದೀಶ್ ವಿವರಿಸಿದರು.
ಕಿಂಗ್ ಪಿನ್, ಹನಿಟ್ರ್ಯಾಪ್, ದುಡ್ಡು ಹರಿದಾಟದ ಬಗ್ಗೆ ಪ್ರಸ್ತಾವನೆಯಾದರೆ ರಮೇಶ್ ಜಾರಕಿಹೊಳಿ ಇದಕ್ಕೆಲ್ಲ ಸ್ಪಷ್ಟನೆ ಕೊಡಲಿ. ಅಷ್ಟು ದುಡ್ಡು ಹೇಗೆ ಬಂತು ಎನ್ನುವುದರ ಬಗ್ಗೆ ಕೂಡ ಹೇಳಲಿ. ಸರ್ಕಾರ ಮಾಜಿ ಸಚಿವರ ರಕ್ಷಣೆಗೆ ನಿಂತಿದೆ ಅನ್ನೋದು ಸ್ಪಷ್ಟ ಎಂದು ಅವರು ತಿಳಿಸಿದರು.