– ಗ್ರಾಮದೇವತೆ ಜಾತ್ರೆ ರದ್ದು
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಖಾಸಗಿ ಶಾಲೆಯ 10 ವಿದ್ಯಾರ್ಥಿಗಳು ಹಾಗೂ ಖಾಸಗಿ ಬ್ಯಾಂಕಿನ 6 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗ್ರಾಮಸ್ಥರು ಆತಂಕದಲ್ಲೇ ಬದುಕುತ್ತಿದ್ದಾರೆ. ಅಲ್ಲದೆ ಗ್ರಾಮದೇವತೆಯ ಜಾತ್ರೆಯನ್ನು ಸಹ ರದ್ದು ಮಾಡಲಾಗಿದೆ.
ವಾರದ ಹಿಂದಷ್ಟೇ ಗ್ರಾಮದಲ್ಲಿ 24 ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದವು. ಇದರ ಮಧ್ಯೆ ಇದೀಗ ಒಂದೇ ದಿನದಲ್ಲಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ನಂಟಿನಿಂದ ಒಂದೇ ಕುಟುಂಬದ ಐವರಿಗೆ ಇದೇ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಗ್ರಾಮದ 1 ಸಾವಿರಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು.
ಈಗ ಶಾಲಾ ಮಕ್ಕಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ. ಕೊರೊನಾ ಸ್ಫೋಟದಿಂದ ಭಾವನಸೌಂದತ್ತಿ ಗ್ರಾಮದಲ್ಲಿ ಏಪ್ರಿಲ್ 2ರಂದು ನಡೆಯಬೇಕಿದ್ದ ಗ್ರಾಮ ದೇವತೆ ಸುಗಂಧಾದೇವಿ ಜಾತ್ರಾ ಮಹೋತ್ಸವ ರದ್ದು ಮಾಡಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದು, ಕಳೆದ 65 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇವಿ ಜಾತ್ರಾ ಮಹೋತ್ಸವ ರದ್ದಾಗಿದೆ.