ಬೆಂಗಳೂರು: ರಾಜ್ಯದಲ್ಲಿ ಸದ್ಯ ‘ಒಂದೆಂಡ್ತಿ’ ರಾಜಕಾರಣ ನಡೆಯುತ್ತಿದೆ. ಸುಧಾಕರ್ ಅವರು ನೀಡಿರುವ ಹೇಳಿಕೆಯಿಂದ ಇಂದು ರಾಜ್ಯ ರಾಜ್ಯಕಾರಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಆರೋಗ್ಯ ಸಚಿವರ ಈ ಹೇಳಿಕೆಗೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು ಜೋರಾಗಿ ನಕ್ಕಿದ್ದಾರೆ.
ನಗರದಲ್ಲಿ ಸುಧಾಕರ್ ಹೇಳಿಕೆ ಪ್ರಸ್ತಾಪಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸೌಮ್ಯ ರೆಡ್ಡಿಯವರು ನಿಜನಾ.. ಹೀಗೆ ಹೇಳಿದ್ದಾರಾ..? ಮಹಿಳೆಯರಿಗೂ ಪತ್ನಿಯರು ಇರುತ್ತಾರಾ..? ಎಂದು ಅಚ್ಚರಿಯಿಂದಲೇ ಮರು ಪ್ರಶ್ನಿಸಿ ನಕ್ಕಿದ್ದಾರೆ. ಅಲ್ಲದೆ ನನಗೆ ಅರ್ಥ ಆಗಿಲ್ಲ. ನೀವು ಹೇಳಿದ ಪ್ರಶ್ನೆಯನ್ನು ನಾನು ಕರೆಕ್ಟಾಗಿ ಅರ್ಥ ಮಾಡಿಕೊಂಡ್ನಾ ಎಂದು ಗೊಂದಲಕ್ಕೀಡಾಗಿ ಶಾಸಕಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಕೆಲ ಸಮಯದ ಬಳಿಕ ಪತ್ರಕರ್ತರು ಸುಧಾಕರ್ ಹೇಳಿಕೆಯನ್ನು ಶಾಸಕಿಗೆ ಕೇಳಿಸಿದ್ದಾರೆ. ಆಗ ಅವರು ಕಾಮಿಡಿ ಮಾಡ್ತಾ ಇದ್ದಾರಾ..? ಇದಕ್ಕೆ ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿ ನಗುತ್ತಲೇ ಅಲ್ಲಿಂದ ತೆರಳಿದ್ದಾರೆ.
ಸುಧಾಕರ್ ಹೇಳಿದ್ದೇನು..?
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ವಿಪಕ್ಷ ನಾಯಕರಿಗೆ ಸವಾಲು ಎಸೆದರು. ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಮಾನ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುವುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ? ನೈತಿಕತೆ ಬಗ್ಗೆ ಮಾತನಾಡೋರು ಮಾದರಿ ಆಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.