ಡೆಹರಾಡೂನ್: ಹಿಂದೂಯೇತರರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಅಳವಡಿಸಿದ್ದ ದಕ್ಷಿಣಪಂಥಿ ಸಂಘಟನೆಯ ಹಿಂದೂ ಯುವ ವಾಹಿನಿಯ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಉತ್ತರಾಖಂಡ ರಾಜಧಾನಿ ಡೆಹರಾಡೂನ್ ನಗರದ 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಬ್ಯಾನರ್ ಅಳವಡಿಸಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಪೊಲೀಸರು ವಿವಾದಾತ್ಮಕ ಬರಹವುಳ್ಳ ಬ್ಯಾನರ್ ಗಳನ್ನ ತೆಗೆದು ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ಯಾನರ್ ನಲ್ಲಿ ಹಿಂದೂ ಧರ್ಮದ ರಕ್ಷಣೆಯ ಕುರಿತಾಗಿ ಹೇಳಲಾಗಿತ್ತು. ಅನ್ಯ ಧರ್ಮದವರು ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ಬರುವ ಅವಶ್ಯಕತೆ ಇಲ್ಲ. ಒಂದು ವೇಳೆ ಪ್ರವೇಶ ಮಾಡಿದವರನ್ನ ಥಳಿಸಲಾಗುವುದು ಎಂದು ಎಚ್ಚರಿಕೆಯನ್ನ ಹಿಂದೂ ವಾಹಿನಿಯ ಕಾರ್ಯಕರ್ತರು ನೀಡಿದ್ದರು. ಆರಂಭದಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಚಕರಾತಾ ರಸ್ತೆ, ಸುದೋವಾಲಾ ಮತ್ತು ಪ್ರೇಮನಗರದ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಲಾಗಿತ್ತು.
ಅನ್ಯ ಕೋಮಿನವರು ಹಿಂದೂ ದೇವಾಲಯದೊಳಗೆ ಬಂದವರನ್ನ ಥಳಿಸಲಾಗುವುದು. ಥಳಿಸಿದ ಬಳಿಕ ಪೊಲೀಸರ ವಶಕ್ಕೆ ನೀಡಲಾಗುವುದು. ದೇವಸ್ಥಾನ ಅನ್ನೋದು ಹಿಂದೂ ಧರ್ಮದ ನಂಬಿಕೆ ಮತ್ತು ಆಸ್ಮಿತೆ. ದೇವಾಲಯವನ್ನ ಧ್ಯಾನದ ಕೇಂದ್ರ ಅಂದ್ರೆ ಶಾಂತಿ ಸಿಗುವ ಸ್ಥಳ. ಹಾಗಾಗಿ ಅನ್ಯ ಧರ್ಮದವರಿಗೆ ದೇವಾಲಯದ ಪರಿಸರದಲ್ಲಿ ಏನು ಕೆಲಸ? ಧರ್ಮ ರಕ್ಷಣೆಗಾಗಿ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹಿಂದೂ ಯುವ ವಾಹಿನಿಯ ಪ್ರದೇಶ ಅಧ್ಯಕ್ಷ ಗೋವಿಂದ್ ವಾದವಾ ಬ್ಯಾನರ್ ಅಳವಡಿಕೆಯನ್ನ ಸಮರ್ಥಿಸಿಕೊಂಡಿದ್ದರು.
ಇದು ಬಿಜೆಪಿ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ. ನಾಲ್ಕು ವರ್ಷಗಳಲ್ಲಿ ಏನು ಮಾಡದ ಕಮಲ ಸರ್ಕಾರ, ತನ್ನ ಹುಳುಕುಗಳನ್ನ ಮುಚ್ಚಿಕೊಳ್ಳಲು ಸಂಸ್ಕೃತಿಗೆ ಸಂಬಂಧಿಸಿದ ವಿವಾದಿತ ವಿಷಯಗಳನ್ನ ಮುನ್ನಲೆಗೆ ತಂದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಇತ್ತ ಸಾರ್ವಜನಿಕರು ಮತ್ತು ಚಿಂತಕರು, ಈ ಘಟನೆ ಹಿಂಸೆ ರೂಪ ಪಡೆದುಕೊಳ್ಳುವ ಮುನ್ನ ಪೊಲೀಸರೇ ಈ ಬ್ಯಾನರ್ ಗಳನ್ನು ತೆಗೆಯಬೇಕೆಂದು ಆಗ್ರಹಿಸಿದ್ದರು.