ಮೈಸೂರು: ಸದ್ಯ ಪ್ರಚಲಿತದಲ್ಲಿರುವ ವಿಚಾರವೆಂದರೆ ಮಾಜಿ ಸಚಿವರ ಸಿಡಿ ಪ್ರಕರಣ. ಇದೀಗ ಈ ಸಂಬಂಧ ಸಿನಿಮಾ ಕೂಡ ಆಗಲಿದ್ದು, ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಆಗಿದೆ.
ಹೌದು. ‘ಸಿಡಿ ಲೇಡಿ’ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಒಂದು ಸಿನಿಮಾ ಆಗಿ ಹೊರಹೊಮ್ಮಲಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಂದೇಶ್, ಸಿಡಿ ಲೇಡಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ. ಕಥೆ ಚಿತ್ರಕಥೆ ಇನ್ನೂ ಸಿದ್ಧವಾಗಿಲ್ಲ. ಯಾವಾಗ ಸೆಟ್ಟೇರುತ್ತದೆ ಅನ್ನೋ ಬಗ್ಗೆಯೂ ನಿರ್ಧರಿಸಿಲ್ಲ. ಮುಂದೆ ಈ ಎಲ್ಲಾ ವಿಚಾರಗಳು ಫೈನಲ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಸಂದೇಶ್ ಫಿಲಂಸ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಸಿಡಿ ಲೇಡಿ ಶೀರ್ಷಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು. ಯಾವುದೇ ಟೈಟಲ್ ರಿಜಿಸ್ಟರ್ ಆಗಬೇಕಾದರೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ಕರೆದು ಪರ ವಿರೋಧ ಒಳಿತು ತೀರ್ಮಾನಿಸಿ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣಗಳ ಜೊತೆಯಲ್ಲಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾದಾಗ ಮಾಧ್ಯಮಗಳಲ್ಲಿ ಹೆಚ್ಚು ಬಳಕೆಯಾದ ಪದಗಳನ್ನ ಶೀರ್ಷಿಕೆ ನೀಡುವಂತೆ ಹಲವರು ಅರ್ಜಿ ಸಲ್ಲಿಸಿದ್ದರು.