– ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಮುಖಂಡ ಹಾಗೂ ರೌಡಿಶೀಟರ್ ಅಮ್ಜದ್ ಕೊಲೆ ಪ್ರಕರಣ ಸಂಬಂಧ ಶಿಡ್ಲಘಟ್ಟ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.
ರಘು ಅಲಿಯಾಸ್ ರಾಘವೇಂದ್ರ, ಗೂಳಿ ಅಲಿಯಾಸ್ ಅಕ್ಷಯ್, ಶ್ರೀನಾಥ್, ಚಾಲಕ ಪವನ್, ಅಮಿತ್, 16 ವರ್ಷದ ಅಪ್ರಾಪ್ತ, ಕಲ್ಲು ಅಲಿಯಾಸ್ ಕಲಂಧರ್ ಹಾಗೂ ಡಾಂಬರ್ ಮೌಲಾ ಬಂಧಿತರು.
ಕೊಲೆಗೆ ಕಾರಣ ಏನು?
ಕಲ್ಲು ಅಲಿಯಾಸ್ ಕಲಂಧರ್ ಗೆ ಕೆಲ ವರ್ಷಗಳ ಹಿಂದೆ ಮೃತ ಕಾಂಗ್ರೆಸ್ ಮುಖಂಡ 43 ವರ್ಷದ ಅಮ್ಜದ್ ಹಲ್ಲೆ ಮಾಡಿದ್ದ ಎನ್ನಲಾಗಿದ್ದು, ಇದರಿಂದ ಕಲ್ಲು ಅಲಿಯಾಸ್ ಕಲಂಧರ್ ನ ಎರಡು ಕೈಗಳು ಸ್ವಾಧೀನ ಇಲ್ಲದಂತಾಗಿತ್ತು. ಇದೇ ದ್ವೇಷದಿಂದ ತನ್ನ ಸಹಚರರ ಜೊತೆ ಸೇರಿ ಸಂಚು ರೂಪಿಸಿದ ಕಲಂಧರ್ ಅಮ್ಜದ್ ಕೊಲೆ ಮಾಡಿದ್ದಾನೆ.
ಕಲಂಧರ್, ಅಮಿತ್, ರೋಷನ್, ಮೌಲಾ ನಾಲ್ವರು ಅಮ್ಜದ್ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಇತ್ತ ಚಾಲಕ ಒವನ್ ಒಮ್ನಿ ಕಾರಿನ ಮೂಲಕ ಅಮ್ಜದ್ ಬೈಕ್ ಹಿಂಬಾಲಿಸಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಕೂಗಳತೆ ದೂರದ ರೈಲ್ವೆ ಅಂಡರ್ ಪಾಸ್ ಬಳಿ ಅಮ್ಜದ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಆಗ ಕೂಡಲೇ ಕಾರಿನಲ್ಲಿದ್ದ ರಘು, ಅಕ್ಷಯ್ ಹಾಗೂ ಶ್ರೀನಾಥ್ ಅಮ್ಜದ್ ಮೇಲೆ ದಾಳಿ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಅದೇ ಒಮ್ನಿ ಕಾರಿನಲ್ಲಿ ಪರಾರಿಯಾಗಿದ್ದರು. ಆದರೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.