ಭೋಪಾಲ್: 45 ವರ್ಷದ ಮಹಿಳೆಯೊಬ್ಬಳು ಅತ್ಯಾಚಾರ ಎಸಗಲು ಪ್ರಯತ್ನಿಸಿದ ವ್ಯಕ್ತಿಯ ಮರ್ಮಾಂಗ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಮಾರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆಗೆ ಜರುಗಿದ್ದು, ಈ ಕುರಿತಂತೆ ಮಹಿಳೆ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಮಹಿಳೆಯ ಪತಿ ಮನೆಯಲ್ಲಿರದನ್ನು ನೋಡಿಕೊಂಡು 45 ವರ್ಷದ ವ್ಯಕ್ತಿ ಮನೆಗೆ ಬಂದಿದ್ದಾನೆ. ಈ ವೇಳೆ ಮಹಿಳೆ ತನ್ನ 13 ವರ್ಷದ ಮಗನೊಂದಿಗೆ ಮನೆಯೊಳಗೆ ಇದ್ದಳು. ವ್ಯಕ್ತಿ ಮನೆಗೆ ಬಂದಿದ್ದನ್ನು ನೋಡಿ ಗಾಬರಿಯಿಂದ ಬಾಲಕ ಕಳ್ಳನೆಂದು ಭಾವಿಸಿ ಮನೆಯಿಂದ ಹೊರಗೆ ಓಡಿ ಹೋಗಿದ್ದಾನೆ.
ಇದೇ ವೇಳೆ ಆರೋಪಿ, ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಹಾಸಿಗೆ ಕೆಳಗಿದ್ದ ಕುಡುಗೋಲನ್ನು ಎತ್ತಿಕೊಂಡು ಆರೋಪಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಆತನಿಂದ ತಪ್ಪಿಸಿಕೊಂಡು ಮಹಿಳಾ ಪೊಲೀಸ್ ಔಟ್ ಪೋಸ್ಟ್‍ಗೆ ತಲುಪಿ, ನಡೆದ ಎಲ್ಲಾ ಘಟನೆಯನ್ನು ಪೊಲೀಸರಿಗೆ ವಿವರಿಸಿ ದೂರು ದಾಖಲಿಸಿದ್ದಾಳೆ.
ಘಟನೆ ಕುರಿತಂತೆ ಮಾತನಾಡಿದ ಸಬ್ ಇನ್ಸ್ ಪೆಕ್ಟರ್ ಧಮೇಂದ್ರ ಸಿಂಗ್ ರಜಪೂತ್, ಆರೋಪಿ ವಿರುದ್ಧ ಶುಕ್ರವಾರ ಬೆಳಗ್ಗೆ 1.30ರ ಸುಮಾರಿಗೆ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಆರೋಪಿಯನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.