ಶಿವಮೊಗ್ಗ: ಸಿಡಿ ವಿಚಾರದಲ್ಲಿ ಬಿಜೆಪಿಯವರು ನನ್ನನ್ನು ಸಿಲುಕಿಸಲು ನೋಡಿದ್ದಾರೆ. ಬಿಜೆಪಿಯವರು ಮಾಡಬಾರದ್ದನ್ನು ಮಾಡಿಕೊಂಡು ನಂತರ ಆರೋಪವನ್ನು ನಮ್ಮ ಮೇಲೆ ಹೊರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ನಾನು ಯಾರಿಗೂ ಹೆದರುವ ಮಗನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಜನಾಕ್ರೋಶ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ನಡೆಯಲಿರುವ ಎಸ್.ಐ.ಟಿ. ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೆವೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಕೇಸು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಿರುಕುಳ ನೀಡಲು ಬಿಜೆಪಿ ಯತ್ನಿಸಿದೆ. ಇದರ ವಿರುದ್ಧ ಎಲ್ಲೆಡೆ ಕೇಸು ದಾಖಲಿಸುತ್ತೇವೆ. ಬಿಜೆಪಿಯವರು ಮಾಡಬಾರದು ಮಾಡಿಕೊಂಡು ನಮ್ಮನ್ನು ದೂರುತ್ತಿದ್ದಾರೆ. ಇರಲಿ ಕಾಲ ಉತ್ತರ ಹೇಳುತ್ತೆ. ಬಿಜೆಪಿಯವರು ಮಾಡುತ್ತಿರುವ ಎಲ್ಲ ಮಸಲತ್ತು ಗೊತ್ತಿದೆ. ಟೈಂ ಬಂದಾಗ ಎಲ್ಲಾ ಬಿಚ್ಚಿಡ್ತೀನಿ, ಈ ಬಗ್ಗೆ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ ಎಂದು ಬಾಂಬ್ ಸಿಡಿಸಿದ್ದಾರೆ.