ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಗೂ ದೂರು ದಾಖಲಿಸಿದ್ದು, ಇದೀಗ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಸಿಡಿ ಹೊರ ಬಿದ್ದ 12 ದಿನಗಳ ನಂತರ ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತನ ಮೂಲಕ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ಪುಟದ ದೂರಿನಲ್ಲಿ ಜಾರಕಿಹೊಳಿ ಯಾರ ಹೆಸರನ್ನೂ ಉಲ್ಲೆಖಿಸಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ಇದೊಂದು ನಕಲಿ ಸಿಡಿಯಾಗಿದೆ ಎಂದಿದ್ದಾರೆ. ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಸಚಿವರ ಸಿಡಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ತನಿಖಾ ತಂಡ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು ಕೂಡ ಎಸ್‍ಐಟಿ ವಿಚಾರಣೆ ಮುಂದುವರಿಸಿದ್ದು, ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರೇ ಸ್ವತಃ ದೂರು ದಾಖಲಿಸಿದ್ದಾರೆ.
ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ನನ್ನ ಹೆಸರನ್ನು ಕೆಡಿಸಲೆಂದೇ ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ನಾನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರ ಅಪಾರ್ಟ್‍ಮೆಂಟ್ ಮತ್ತು ಹುಳಿಮಾವಿನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.