ಹುಬ್ಬಳ್ಳಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಘಟಗಿ ತಾಲೂಕಿನ ಸಂಗದೇವರ ಕೊಪ್ಪದಲ್ಲಿ ನಡೆದಿದೆ.
ಘಟನೆಯಲ್ಲಿ ತಾಯಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಸಂಗವ್ವ ಮುದೆಣ್ಣವರ ಮೃತ ಮಹಿಳೆ. ಶಂಕ್ರಪ್ಪ ಮುದೆಣ್ಣವರ, ಸುರೇಶ್ ಮುದೆಣ್ಣವರ ಬದುಕುಳಿದವರು. ಇದರಲ್ಲಿ ಶಂಕ್ರಪ್ಪನ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಿಯುವ ನೀರಿನ ನಲ್ಲಿಯ ಬಳಿ ಇದ್ದ ಕಲ್ಲು ತೆಗೆದಿದ್ದ ಕಾರಣಕ್ಕೆ ಸಂಬಂಧಿ ಬಸಲಿಂಗಪ್ಪ ಮುದಣ್ಣವರ ಮತ್ತಿತರರು ಇತ್ತಿಚೆಗೆ ಸಂಗವ್ವ ಹಾಗೂ ಆಕೆಯ ಮಕ್ಕಳೊಂದಿಗೆ ಜಗಳವಾಡಿದ್ದರು. ತಾಯಿ-ಮಗನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಸಂಗವ್ವ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದರಿಂದ ಆಕ್ರೋಶಗೊಂಡು ಬಸಲಿಂಗಪ್ಪ ಇತರರು ಸಂಗವ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನನೊಂದು ಸಂಗವ್ವ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಸಂಗವ್ವನನ್ನು ರಕ್ಷಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.