ಬೆಂಗಳೂರು: ಸಚಿವ ಎಸ್. ಟಿ ಸೋಮಶೇಖರ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ಎಸ್‍ಟಿಎಸ್ ಹೇಳಿಕೆಗೆ ಗರಂ ಆದ ಡಿಕೆಶಿ, ಬಿಜೆಪಿಯವರಗಿಂತ ಜಾಸ್ತಿ ಹತ್ತಿರವಾಗಿ ನಾನು ಎಸ್ ಟಿ ಸೋಮಶೇಖರ್ ನನ್ನ ನಾನು ನೋಡಿದ್ದೇನೆ. ನಾವು ಜೊತೆಯಲ್ಲಿ ರಾಜಕಾರಣ ಮಾಡಿದ್ದೇವೆ. 20 ವರ್ಷದಿಂದ ಎಸ್ ಟಿ ಸೋಮಶೇಖರ್ ಏನೇನು ಮಾಡಿದ್ದಾರೆ ಅದನ್ನ ಹೇಳಲಿ ಎಂದು ಚಾಲೆಂಜ್ ಹಾಕಿದರು.
ಸೋಮಶೇಖರ್ ಹೇಳಿಕೆ ನಾನು ನೋಡಿದ್ದೇನೆ, ಅವರು ನನ್ನ ಸ್ನೇಹಿತ. ಅವರು ಹೇಳಿದ್ದಾರೋ, ಹೇಳಿಸಿದ್ದಾರೋ ಏನೋ ಅವರ ಪಕ್ಷದ ತೀರ್ಮಾನ. ಕಾಂಗ್ರೆಸ್ ಪಕ್ಷಕ್ಕೆ ಇವರು 20 ವರ್ಷ ಭಾಗವಾಗಿದ್ದರು. ಏನೇನು ಮಾಡಿದ್ದಾರೆ ಅಂತ ಅವರೇ ಸಾಕ್ಷಿ ಕೊಟ್ಟರೆ ಸಂತೋಷ. ಬಾಂಬೆಯಲ್ಲಿ ನಡಿತೋ ಬೆಂಗಳೂರಲ್ಲಿ ನಡಿತೋ ಬಿಜೆಪಿ ಸರ್ಕಾರ ಇತ್ತೋ ಶಿವಸೇನೆ ಸರ್ಕಾರ ಇತ್ತೋ..? ಏನು ಮಾಡೋಕೆ ಆಗುತ್ತೆ ಎಂದರು.
ಸೋಮಶೇಖರ್ ಜೊತೆಯಲ್ಲಿ ಇರುವವರು ಎಲ್ಲರೂ ಸೇರಿಕೊಂಡು ಒಂದು ಸುದ್ದಿಗೋಷ್ಠಿ ಮಾಡಲಿ. ಸುದ್ದಿಗೋಷ್ಟಿ ಮಾಡಿ ಎಲ್ಲವನ್ನೂ ಬಿಚ್ಚಡಲಿ. ಕಾಂಗ್ರೆಸ್ ಪಕ್ಷದ ಜೊತೆ 20 ವರ್ಷ ಏನ್ ಮಾಡಿದ್ದಾರೋ ಅದನ್ನ ಹೇಳಲಿ. ಇಂತಹ ಕೆಲಸನೇ ಮಾಡಿದ್ದಾರೆ ಎಂದು ಅದನ್ನ ಹೇಳಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿಡಿ ಎಂದ ಯತ್ನಾಳ್, ವಿಶ್ವನಾಥ್ ಹೇಳಿದ್ದರು. ಬ್ಲಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಅವರು ಹೇಳಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಒಬ್ಬರು ಹೇಳ್ತಾರೆ. ಅದರ ಬಗ್ಗೆ ತನಿಖೆಯಾಗಲಿ ಎಂದು ಡಿಕೆಶಿ ಆಗ್ರಹಿಸಿದರು.
ಎಸ್‍ಟಿಎಸ್ ಹೇಳಿದ್ದೇನು..?: ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ಸಿನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದ್ದರು.