ಕಾರವಾರ: ಆಯಿಲ್ ಖರೀದಿಸಲು ಪೆಟ್ರೋಲ್ ಬಂಕ್‍ಗೆ ಬಂದಿದ್ದ ವ್ಯಕ್ತಿಯೊಬ್ಬ ಬಂಕ್‍ನ ಕ್ಯಾಷ್ ಕೌಂಟರ್‌ನಲ್ಲಿದ್ದ 1 ಲಕ್ಷ ರೂಪಾಯಿ ಹಣವನ್ನು ಎಗರಿಸಿ ಪರಾರಿಯಾಗಿರುವ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಈತನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
ಕುಮಟಾ ಪಟ್ಟಣದ ಮೂರೂರು ಕ್ರಾಸ್‍ನಲ್ಲಿರುವ ವಿ.ಎಂ.ಮಿರ್ಜಾನಕರ್ ಪೆಟ್ರೋಲ್ ಬಂಕ್‍ಗೆ ಬೈಕಿನಲ್ಲಿ ಬಂದ ಕಳ್ಳ, ಆಯಿಲ್ ನೀಡುವಂತೆ ತಿಳಿಸಿದ್ದಾನೆ. ಆತನಿಗೆ ಬಂಕ್ ಸಿಬ್ಬಂದಿ ಆಯಿಲ್ ನೀಡುತ್ತಿದ್ದ ಸಮಯದಲ್ಲೇ ಮೂರು, ನಾಲ್ಕು ವಾಹನಗಳು ಡೀಸೆಲ್‍ಗಾಗಿ ಬಂಕ್‍ಗೆ ಬಂದಿವೆ.
ಬಂಕ್ ಸಿಬ್ಬಂದಿ ಈ ವೇಳೆ ಕ್ಯಾಶ್ ಬಾಕ್ಸ್ ಲಾಕ್ ಮಾಡದೇ ವಾಹನಗಳಿಗೆ ಡೀಸೆಲ್ ಹಾಕಲು ಹೋಗಿದ್ದಾನೆ. ಈ ಸಮಯವನ್ನೇ ಉಪಯೋಗಿಸಿಕೊಂಡ ಕಳ್ಳ ತನ್ನ ಚಾಣಾಕ್ಷತನ ಉಪಯೋಗಿಸಿ ಕ್ಯಾಷ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂ. ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ.
ವಾಹನಗಳಿಗೆ ಡೀಸೆಲ್ ತುಂಬಿ ಬಂದ ಬಳಿಕ ಕ್ಯಾಶ್ ಬಾಕ್ಸ್‍ನಲ್ಲಿ ಹಣ ಇಲ್ಲದ್ದನ್ನು ಗಮನಿಸಿದ ಸಿಬ್ಬಂದಿ ಸಿ.ಸಿ ಕ್ಯಾಮರಾ ವೀಕ್ಷಣೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.