ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ತಮ್ಮ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಸಿಎಂ ತವರು ಜಿಲ್ಲೆ ಶಿವಮೊಗ್ಗ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಬಿಎಸ್‍ವೈ ತವರಿಗೆ ಸಿಕ್ಕಿದ್ದೇನು..?
ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಶಿವಮೊಗ್ಗ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ 100 ಕೋಟಿ, 2 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ ಹಾಗೂ ಮಲೆನಾಡು ಕರಾವಳಿ ಭಾಗದ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರಕ್ಕೆ ಕೊಟ್ಟಿರೋದೇನು..?
ಬಾದಾಮಿಯ ಗುಳೇದಗುಡ್ಡದಲ್ಲಿ ಗುಳೆ ತಪ್ಪಿಸಲು ಜವಳಿ ಪಾರ್ಕ್ (ಖಾಸಗಿ-ಸರ್ಕಾರಿ ಸಹಭಾಗಿತ್ವ), ಬಾದಾಮಿಯಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಯೋಜನೆಗೆ 25 ಕೋಟಿ ಮೀಸಲು. ಕುರಿ, ಮೇಕೆಗಳ ಆಕಸ್ಮಿಕ ಸಾವಿಗೆ ಪರಿಹಾರ ನೀಡುವ ‘ಅನುಗ್ರಹ ಕೊಡುಗೆ’ ಮುಂದುವರಿಕೆ ಮಾಡಲಾಗಿದೆ.
ಗೌಡರ ಕುಟುಂಬದ ಓಲೈಕೆ..!
ರಾಮನಗರದಲ್ಲಿ ರೇಷ್ಮೆಗೂಡು ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ – 75 ಕೋಟಿ (ನಬಾರ್ಡ್ ಸಹಾಯ), 10 ವರ್ಷದಿಂದ ಬಾಕಿ ಉಳಿದಿರುವ ಹಾಸನದ ಏರ್‍ಪೋರ್ಟ್‍ಗೆ 175 ಕೋಟಿ ಮೀಸಲು. ಹಾಸನದಲ್ಲಿ ಅಂಬೇಡ್ಕರ್ ಸ್ಮಾರಕ ಭವನ ಸ್ಥಾಪನೆಗೆ 1 ಕೋಟಿ ಅನುದಾನ ನೀಡುವುದಾಗಿ ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದಾರೆ.