ಲಕ್ನೋ: ಇತರೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಾಧ್ಯಾಪಕರು ಗದರಿಸಿದ್ದು, ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರೊಂದಿಗೆ ಪ್ರಾಧ್ಯಾಕರ ಮೇಲೆಯೇ ಗುಂಡು ಹಾರಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸರಸ್ವತಿ ವಿಹಾರದ ಕಾಲೋನಿಯ ಖಾಸಗಿ ಶಾಲೆಯ ಬಳಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ತ್ಯಾಗಿ ಅವರು ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಡು ಹಾರಿಸಲಾಗಿದೆ.
ಗ್ರಾಮಾಂತರ ಎಸ್‍ಪಿ ಇರಾಜ್ ರಾಜಾ ಈ ಕುರಿತು ಮಾಹಿತಿ ನೀಡಿದ್ದು, ವಿದ್ಯಾರ್ಥಿ ತರಗತಿಯಲ್ಲಿ ಇತರ ಸಹಪಾಠೀಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ದ್ವೇಷ ಬೆಳೆಸಿಕೊಂಡಿದ್ದು, ಈ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಪ್ಲಾನ್ ಮಾಡಿದ್ದು, ತನ್ನ ಮೂವರು ಸಹಪಾಠಿಗಳೊಂದಿಗೆ ಸೇರಿ ಪ್ರಾಧ್ಯಾಪಕರ ಮೇಲೆಯೇ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಧ್ಯಾಪಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಹತ್ತಿರದ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯದಿಂದ ಗುರುತಿಸಲಾಗಿದ್ದು, ವಿಚಾರಣೆಗೆ ಹಾಜರುಪಡಿಸುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅವರ ಮೊಬೈಲ್ ಫೋನ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಪ್ರಾಧ್ಯಾಪಕರು ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.