ಬೆಂಗಳೂರು: ಕೃಷಿ ಸಚಿವರಾದ ಬಿಸಿ ಪಾಟೀಲ್ ಮನೆಯಲ್ಲಿಯೇ ಕೊರೊನಾ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯ ಕಾರ್ಯಾಲಯವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಕಾರಣ ನೀಡಿದೆ.
ಪತ್ರದಲ್ಲಿ ಏನಿದೆ?
ಮಾರ್ಚ್ 2ರಂದು ಮೂರನೇ ಹಂತದ ತಾಲೂಕಿನ ಸಾರ್ವಜನಿಕರಿಗೆ (60 ವರ್ಷ ಮೇಲ್ಪಟ್ಟ ನಾಗರಿಕರಿಗೆ) ಕೋವಿಡ್-19 ಲಸಿಕಾ ಕಾರ್ಯಕ್ರಮ ಚಾಲನೆಯಾಗಿದ್ದು, ಮಾನ್ಯ ಬಿ.ಸಿ ಪಾಟೀಲ್ ಕೃಷಿ ಸಚಿವರು ಕರ್ನಾಟಕ ಸರ್ಕಾರ ಇವರು ತಾಲೂಕಿನ ಪ್ರಥಮ ಪ್ರಜೆಯಾಗಿದ್ದು ಹಾಗೂ ಮಾನ್ಯ ಸಚಿವರಿಗೆ ಆರೋಗ್ಯದಲ್ಲಿ ಬೈಲ್ಯಾಟರಲ್ ನೀಆಸ್ಟಿಯೋ ಆರ್ಥರಿಟಿಸ್ ಹಾಗೂ ಕ್ರಾನಿಕ್ ಲೋಬ್ಯಾಕ್ ಎಖ್ ಆರೋಗ್ಯ ಸಮಸ್ಯೆ ಇರುವುದರಿಂದ ಮಾನ್ಯ ಸಚಿವರ ಕರೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅವಶ್ಯಕ ತುರ್ತು ಸೇವೆ ಅಂಬುಲೆನ್ಸ್ ಹಾಗೂ ಔಷಧಿಗಳೊಂದಿಗೆ ಸಚಿವರಿಗೆ ಕೋವಿಡ್-19 ಲಸಿಕೆಯನ್ನು ನೀಡಿ ನಂತರ 30 ನಿಮಿಷಗಳವರೆಗೆ ನಿಗಾವಹಿಸಲಾಗಿದೆ. ಇನ್ನು ಮುಂದೆ ಕೋವಿಡ್-19 ಮಾರ್ಗಸೂಚಿ ಪ್ರಕಾರ ಸಾರ್ವಜನಿಕರಿಗೆ ಲಸಿಕೆ ನೀಡುತ್ತೇವೆ.
ಬಿಸಿ ಪಾಟೀಲ್ ಲಿಸಿಕೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜ್ಯ ಆರೋಗ್ಯ ಇಲಾಖೆಗೆ ಪ್ರಕರಣದ ವರದಿ ನೀಡುವಂತೆ ಸೂಚಿಸಿದ್ದರು.
ಬಿಸಿ ಪಾಟೀಲ್ ಮತ್ತು ಅವರ ಪತ್ನಿ ವನಜಾ ಹಿರೆಕೂರಿನ ತಮ್ಮ ಮನೆಯಲ್ಲಿಯೇ ವೈದ್ಯರನ್ನು ಕರೆಸಿ ಲಸಿಕೆ ಪಡೆದಿದ್ದರು. ಕೊರೊನಾ ಮಾರ್ಗಸೂಚಿಯ ಪ್ರಕಾರ ಮನೆಯಲ್ಲಿಯೇ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿಲ್ಲ. ಈ ಕಾರಣಕ್ಕೆ ಬಿಸಿ ಪಾಟೀಲ್ ವಿರುದ್ಧ ಹಲವು ಟೀಕೆಗಳು ಕೇಳಿಬಂದಿತ್ತು. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಆರೋಗ್ಯ ಇಲಾಖೆಯು ಪ್ರಕರಣ ಕುರಿತು ವರದಿ ನೀಡುವಂತೆ ರಾಜ್ಯಕ್ಕೆ ಸೂಚನೆ ನೀಡಿತ್ತು.
ರಾಜ್ಯ ಸರ್ಕಾರ ನಮ್ಮ ಗಮನಕ್ಕೆ ಈ ವಿಚಾರ ಬಂದಿರಲಿಲ್ಲ. ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರಕ್ಕೆ ಉತ್ತರ ನೀಡಿತ್ತು.