ವಿಜಯಪುರ: ನನ್ನ ತಂಟೆಗೆ ಬಂದ್ರೆ ಯಾರನ್ನೂ ನಾನು ಬಿಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೆಸರು ಹೇಳದೇ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ಹೊರಹಾಕಿದ್ದಾರೆ.
ವಿಜಯಪುರದ ರೈಲ್ವೇ ಮೇಲ್ಸೇತುವೆ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಕೆಲವರು ನಮಗೆ ವಿರೋಧ ಮಾಡೋದು ನಿಜ. ನಾವು ಯಾರ ಹೆಸರನ್ನ ಸಹ ಹೇಳಲ್ಲ. ವಿರೋಧಿಸುವರರು ಏನಾದ್ರೂ ಮಾಡಿಕೊಳ್ಳಲಿ. ನನ್ನ 45 ವರ್ಷದ ರಾಜಕಾರಣದಲ್ಲಿ ಯಾರನ್ನ ಕೆಣಕಿಲ್ಲ. ನನ್ನ ಕೆಣಕಿದ್ರೆ ನಾನು ಸುಮ್ಮನೆ ಬಿಡೋದಿಲ್ಲ. ನನ್ನ ತಂಟೆಗೆ ಬರಬೇಡಿ ಎಂದು ಅವರಿಗೆ ಕೈ ಮಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
45 ವರ್ಷದ ರಾಜಕಾರಣ ಬಲ್ಲವರಿಗೆ ನನ್ನ ಬಗ್ಗೆ ಗೊತ್ತು. ಅನಾವಶ್ಯಕವಾಗಿ ನಮ್ಮ ಸಹವಾಸಕ್ಕೆ ಬರಬೇಡಿ ಎಂದು ಅವರಿಗೆ ಕೈ ಮುಗಿದು ಹೇಳುತ್ತೇನೆ. ಇಷ್ಟಾದ್ರೂ ಬಂದ್ರೆ ಹರಿಜನರು ಕೈಗಳನ್ನ ಜೇಬಿನಲ್ಲಿಟ್ಟುಕೊಂಡು ಕುಳಿತರಲ್ಲ ಅನ್ನೋದನ್ನ ಅರಿತುಕೊಳ್ಳಲಿ. ಮತದಾರರು 45 ವರ್ಷಗಳಿಂದ ರಾಜಕಾರಣದಲ್ಲಿ ನನ್ನನ್ನು ಉಳಿಸಿಕೊಂಡಿದ್ದರಿಂದ ವಿಜಯಪುರಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.