– ಟ್ರ್ಯಾಕ್ಟರ್ ರ‍್ಯಾಲಿ ಬಗ್ಗೆ ನಾಯಕರ ನಡುವೆ ಮಾತಿನ ಚಕಮಕಿ
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ನಡುವಿನ ವಾಕ್ ಸಮರ ತಾರಕಕ್ಕೇರಿದೆ.
ಟ್ರ್ಯಾಕ್ಟರ್ ರ‍್ಯಾಲಿಯೊಂದಿಗೆ ಡಿಸಿ ಕಚೇರಿಗೆ ನುಗ್ಗಿರುವ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರೂ ಉತ್ತರಕ್ಕೆ, ಪ್ರತ್ಯುತ್ತರ ನೀಡುವುದು ಜೋರಾಗಿಯೇ ನಡೆಯುತ್ತಿತ್ತು. ಸಿ.ಸಿ.ಪಾಟೀಲ್ ಅವರಿಂದ ಹೆದರಿಸುವ ಪ್ರವೃತ್ತಿ ಆರಂಭವಾಗಿದೆ. ದೆಹಲಿಯಲ್ಲಿ ರೈತರನ್ನು ಪಾಕಿಸ್ತಾನಿ, ಖಲಿಕಿಸ್ತಾನಿ ಅಂದರು. ಅದೇ ಆರೋಪವನ್ನು ಇಲ್ಲಿ ಮಾಡುವ ಪ್ರಯತ್ನವನ್ನು ಸರ್ಕಾರದ ಸಚಿವರು ಮಾಡುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿಯಿಂದ ಗದಗವನ್ನು ದೆಹಲಿ ಆಗಲು ಬಿಡಲ್ಲ: ಸಿ.ಸಿ ಪಾಟೀಲ್
ಮನವಿ ನೀಡಲು ಬಂದ ವೇಳೆ ಡಿಸಿ ಇರಲಿಲ್ಲ. ಆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ಪೊಲೀಸರಿಗೆ, ಪ್ರತಿಭಟನಾ ನಿರತ ರೈತರನ್ನು ಹೆದರಿಸುತ್ತಿದ್ದಾರೆ. ನಾವು ರೈತರು ಹೆದರಲ್ಲ. ಗದಗಿನ ಗಂಡು ಭೂಮಿಯಿಂದ ಬಂದವರು ಹೆದರಿ ಓಡಿ ಹೋಗುತ್ತಾರೆ ಎಂದುಕೊಂಡಿದ್ದೀರಾ? ಟ್ರ್ಯಾಕ್ಟರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದರೆ ತಪ್ಪಾ? ಮರಳು ದಂಧೆಕೋರರು, ಮದ್ಯ ಮಾರಾಟಗಾರರು, ಇನ್ಯಾರೋ ಕಾರ್ ತೆಗೆದುಕೊಂಡು ಡಿಸಿ ಕಚೇರಿ ಒಳಗೆ ಬರುತ್ತಾರೆ. ಅದೇ ರೈತರು ಡಿಸಿ ಕಚೇರಿಗೆ ಬರುವುದು ತಪ್ಪಾ ಎಂದು ತಿರುಗೇಟು ನೀಡಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಹ ಹರಿಹಾಯ್ದು, ನನ್ನ ಟೀಕೆಗೆ ಸ್ಪಂದಿಸಿದ್ದಾರೆ ಎಂಬ ಸಮಾಧಾನವಿದೆ. ಆದರೆ ಅರ್ಧ ಟೀಕೆಗೆ ಸ್ಪಂದಿಸುವುದು, ಇನ್ನು ಅರ್ಧ ಟೀಕೆಗೆ ಸ್ಪಂದಿಸದೇ ಇರುವುದು ಸರಿಯಲ್ಲ. ನಿಮ್ಮ ಸರ್ಕಾರ ನುಡಿದಂತೆ ನಡೆಯಲಿಲ್ಲಾ, ಮೋದಿ ಅವರು ವಚನ ಭ್ರಷ್ಠರು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಇದನ್ನು ನೋಡಿದರೆ ನಿಮ್ಮ ಸರ್ಕಾರ ಮಾತು ತಪ್ಪಿದ ಭ್ರಷ್ಠ ಸರ್ಕಾರ ಎಂದು ಒಪ್ಪಿಕೊಂಡಂತೆ ಎಂದು ಹರಿಹಾಯ್ದರು.