ರಾಯಚೂರು: ಜಿಲ್ಲೆಯ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿದ ವೇಳೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿಯಿಂದ ಶೂ ತೊಡಿಸಿಕೊಂಡು ವಿವಾದಕ್ಕೀಡಾಗಿದ್ದಾರೆ.
ಲಿಂಗಸುಗೂರಿನ ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಮುರುಗೇಶ್ ನಿರಾಣಿ, ಅಧಿಕಾರಿಗಳ ಸಭೆ ನಡೆಸಿ ನಂತರ ಗಣಿ ವೀಕ್ಷಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವರು ಅಲ್ಲಿನ ಸಿಬ್ಬಂದಿಯಿಂದ ಸುರಕ್ಷತಾ ಸಾಧನಾ ಮತ್ತು ಕಾಲಿಗೆ ಶೂ ತೊಡಿಸಿಕೊಂಡಿದ್ದಾರೆ.
ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ನಿರಾಣಿ, ಈ ಆರ್ಥಿಕ ವರ್ಷದಲ್ಲಿ ಹಟ್ಟಿ ಚಿನ್ನದ ಗಣಿಯಿಂದ 1700 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಗಣಿಯನ್ನು ಆಧುನಿಕರಣಗೊಳಿಸಲು ಚಿಂತನೆ ನಡೆದಿದ್ದು, ಈಗಾಗಲೇ ಆಧುನಿಕರಣಕ್ಕೆ ವರದಿ ತಯಾರಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಚಿನ್ನದ ಉತ್ಪಾದನೆಯ ಪ್ರಮಾಣ ಕಡಿತವಾಗಿತ್ತು ಈಗ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಹಟ್ಟಿ ಚಿನ್ನದಗಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ನಿರಾಣಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಕಂಪನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. 60 ಜನ ಸಂತ್ರಸ್ತರಿಗೆ ಹಟ್ಟಿ ಕಂಪನಿಯಲ್ಲಿ ಕೆಲಸ ನೀಡಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಮಿಕರಿಗೆ ಅನ್ಯಾಯವಾಗದಂತೆ ಅಧಿಕಾರಿಗಳೊಂದಿಗೆ ಬೇಡಿಕೆ ಕುರಿತು ಚರ್ಚೆ ಮಾಡುತ್ತೇನೆ. 18 ಸಾವಿರ ಕೋಟಿ ರೂ. ಗಣಿಯ ಹಣವು ಸುಪ್ರೀಂ ಕೋರ್ಟ್‍ನಲ್ಲಿದೆ ಅದನ್ನು ಬಳಸಿಕೊಳ್ಳಲಾಗುವುದು ಎಂದರು.
ಮೀಸಲಾತಿ ಕೇಳಿ ಹಲವು ಸಮಾಜಗಳು ಹೋರಾಟ ಮಾಡುತ್ತಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಮೀಸಲಾತಿಗೆ ಬಂದಿರು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಮೀಸಲಾತಿಗಾಗಿ ಬಂದಿರುವ ಅರ್ಜಿಗಳನ್ನು ಪರಿಗಣಿಸಿ ಅಧ್ಯಯನಕ್ಕೆ ಸಮಯ ಬೇಕಾಗುತ್ತದೆ. ಅಧ್ಯಯನದ ನಂತರ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ವಿವರಿಸಿದರು.
ಶಿವಮೊಗ್ಗದ ಸ್ಫೋಟ ಪ್ರಕರಣ ಗಣಿ ಕೌಶಲ್ಯ ಹೊಂದದೆ ಇರುವದರಿಂದ ಘಟಿಸಿದೆ. ಹಂತ ಹಂತವಾಗಿ ಗಣಿ ಕೌಶಲ್ಯ ತರಬೇತಿ ನೀಡಲಾಗುವುದು. ಗಣಿ ವಿಷಯಕ್ಕಾಗಿ ಸರ್ಟಿಫಿಕೇಟ್ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದೆ ಇದಕ್ಕೆ ಕಾರಣ ಎಂದು ಟೀಕಿಸಿ, ಮುಂದಿನ ದಿನಗಳಲ್ಲಿ ಗಣಿಗಳಲ್ಲಿ ಎಕ್ಸಪ್ಲೋಸಿವ್ ಇದ್ದರೆ ಗಣಿ ಗುತ್ತಿಗೆ ರದ್ದು ಮಾಡಲಾಗುವುದು ಎಂದು ಗಣಿ ಮಾಲೀಕರಿಗೆ ನಿರಾಣಿ ಎಚ್ಚರಿಕೆ ನೀಡಿದರು.