ರಾಜ್ಯ ಕಾಂಗ್ರೆಸ್‍ನಲ್ಲಿ ಮೈಸೂರು ಮೈತ್ರಿ ಲಡಾಯಿ – ಕೈ ಸದಸ್ಯರಿಂದಲೇ ಡೀಲ್ ಆರೋಪ

Public TV
3 Min Read
mysuru congress dk shivakumar siddaramaiah

– ಡಿಕೆಶಿ ರಾಜಕೀಯಕ್ಕೆ ಸಿದ್ದರಾಮಯ್ಯ ಫುಲ್ ಗರಂ
– ಹೈಕಮಾಂಡ್‍ಗೆ ದೂರಲು ಸಿದ್ದು ಬಣ ಪ್ಲಾನ್
– ತನ್ವೀರ್ ಸೇಠ್‍ಗೆ ನೋಟಿಸ್ ನೀಡಲು ಪಟ್ಟು

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಲ ಸಂಪನ್ಮೂಲ ಸಚಿವರಾಗಿದ್ದ ಡಿಕೆ ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ಮೂಗು ತೂರಿಸಿದ ಪರಿಣಾಮ ಮುಂದೆ ಸರ್ಕಾರವೇ ಪತನವಾಗಿತ್ತು. ಈಗ ಡಿಕೆಶಿ ಸಿದ್ದರಾಮಯ್ಯನವರ ತವರು ಮೈಸೂರಿನ ರಾಜಕಾರಣದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಇದರಿಂದಾಗಿ ಇಷ್ಟು ದಿನ ಕಾಂಗ್ರೆಸ್‍ನಲ್ಲಿ ಒಳಗೊಳಗೆ ನಡೆಯುತ್ತಿದ್ದ ಗುದ್ದಾಟ ಈಗ ಬೀದಿಗೆ ಬಿದ್ದಿದೆ.

ಸಿದ್ದರಾಮಯ್ಯಗೆ ಡೋಂಟ್‍ಕೇರ್ ಎನ್ನುತ್ತಾ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಡಿಕೆಶಿ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಕೆರಳಿದ್ದು, ಡಿಕೆಶಿ ಮತ್ತು ಕುಮಾರಸ್ವಾಮಿ ವಿರುದ್ಧ ಆಪ್ತರ ಬಳಿ ಗುಡುಗಿದ್ದಾರೆ. ಡಿಕೆಶಿ ಮೇಲೆ ನಾನಾ ನೀನಾ ಎನ್ನುವ ಮಟ್ಟಕ್ಕೆ ಮಾತನಾಡಿದ್ದಾರೆ ಎಂಬ ವಿಚಾರ ಪಬ್ಲಿಕ್‌ ಟಿವಿಗೆ ಮೂಲಗಳಿಂದ ಲಭ್ಯವಾಗಿದೆ.

Siddu DKSHI

ಗುರುವಾರ ಬೆಳಗ್ಗೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಆಪ್ತರು, ಅವರ ಮುಂದೆಯೇ ಡಿಕೆಶಿ ನಿರ್ಧಾರವನ್ನು ಖಂಡಿಸಿದ್ದಾರೆ. ಯಾರನ್ನು ಕೇಳಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದರದಲ್ಲಿ ನಂದೇನು ಇಲ್ಲ. ಎಲ್ಲಾ ಲೋಕಲ್ಲಾಗಿ ನಡೆದುಹೋಗಿದೆ ಎಂದು ಡಿಕೆಶಿ ಜಾರಿಕೊಂಡಿದ್ದಾರೆ. ಡಿಕೆಶಿಯ ಉತ್ತರ ಸಿದ್ದರಾಮಯ್ಯಗೆ ತೃಪ್ತಿ ತಂದಿರಲಿಲ್ಲ.

ಬೇಸತ್ತುಹೋದ ಮಾಜಿ ಸಿಎಂ ಸಿದ್ದರಾಮಯ್ಯ ಮೂರು ದಿನಗಳ ವಿಶ್ರಾಂತಿಗೆಂದು ನಿನ್ನೆ ಸಂಜೆಯೇ ಬೆಂಗಳೂರು ಹೊರವಲಯದ ರೆಸಾರ್ಟ್‍ಗೆ ತೆರಳಿದ್ದಾರೆ. ತೆರಳುವ ವೇಳೆ ಆಪ್ತರ ಬಳಿ ಸಮ್ಮಿಶ್ರ ಸರ್ಕಾರದ ಜೋಡೆತ್ತುಗಳ ವಿರುದ್ಧ ಕೆಂಡ ಕಾರಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ.

ಡಿಕೆ ವಿರುದ್ಧ ಚಾರ್ಜ್‌ಶೀಟ್‌:
ಡಿಕೆಶಿ ಬಣ ಕೈ ಮೇಲಾಗುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಬಣವೂ ಸಕ್ರಿಯವಾಗಿದೆ. ಸಿದ್ದರಾಮಯ್ಯ ಬೆನ್ನಿಗೆ ಅವರ ಆಪ್ತ ನಾಯಕರು ನಿಂತುಬಿಟ್ಟಿದ್ದಾರೆ. ನೀವು ಮೈಸೂರು ಭಾಗದ ಪ್ರಬಲ ನಾಯಕರು. ನಿಮ್ಮನ್ನು ಕೇಳದೆ ತೀರ್ಮಾನಿಸಿರುವುದು ತಪ್ಪು. ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರಬೇಕು. ಪ್ರತ್ಯೇಕವಾಗಿ ನಾವು ನಿಯೋಗ ಬೇಕಿದ್ದರೂ ಹೋಗುತ್ತೇವೆ. ನೀವು ಡಿಸ್ಟರ್ಬ್ ಆಗಬೇಡಿ ಎಂದು ಸಿದ್ದರಾಮಯ್ಯಗೆ ಹೇಳಿದ್ದಾರೆ ಎನ್ನಲಾಗಿದೆ.

ಮೈಸೂರು ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಜೋರಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ 13 ಪಾಲಿಕೆ ಸದಸ್ಯರು ತನ್ವೀರ್ ಸೇಠ್ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ತನ್ವೀರ್ ದ್ರೋಹ ಬಗೆದಿದ್ದು, ಅವರ  ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಡೀಲ್ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು ಕುಮಾರಸ್ವಾಮಿಯನ್ನು ಖುಷಿಪಡಿಸಲು ತನ್ವೀರ್ ಈ ಕೆಲಸ ಮಾಡಿದಂತೆ ಕಾಣುತ್ತಿದೆ  ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರೆ  ಜನ ತುಳಿದುಹಾಕ್ತಾರೆ ಎಂದು ಎಚ್ಚರಿಕೆ ನೀಡಿದರು.

ಸೇಠ್ ವಿರುದ್ಧ ಕಿಡಿ:
ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಣ ಮೈಸೂರು ಕಾಳಗದಲ್ಲಿ ಶಾಸಕ ತನ್ವೀರ್ ಸೇಠ್ ಬಲಿ ಪಶು ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಶಾಸಕ ತನ್ವೀರ್ ಸೇಠ್‍ಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸಿದ್ದರಾಮಯ್ಯ ಬಣ ಒತ್ತಡ ಹೇರುತ್ತಿದೆ. ಇದಕ್ಕೆ ತನ್ವೀರ್ ಸೇಠ್ ಕೂಡ ಸೆಡ್ಡು ಹೊಡೆದು
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಶಿಸ್ತಿನ ಸಿಪಾಯಿ ನಾನು. ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವ ನಿರ್ಧಾರ ಸಂಪೂರ್ಣವಾಗಿ ನನ್ನದು. ಈ ಬಗ್ಗೆ ಸಿದ್ದರಾಮಯ್ಯ ಜೊತೆಯಾಗಲಿ, ಡಿಕೆಶಿ ಜೊತೆಗೆ ಮಾತನಾಡಿರಲಿಲ್ಲ. ಆದರೆ ಸಿದ್ದರಾಮಯ್ಯಗೆ ಕರೆ ಮಾಡಿದರೂ ಅವರು ಸ್ವೀಕರಿಸುವ‌ ಸೌಜನ್ಯ ತೋರಲಿಲ್ಲ. ಸಿದ್ದರಾಮಯ್ಯ ಮನ್ಸಲ್ಲಿ ಏನಿದ್ಯೋ ಗೊತ್ತಿಲ್ಲ. ನಾನಂತೂ ಪಕ್ಷ ಉಳಿಸುವ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಮೈಸೂರು ಮೈತ್ರಿ ಕಾಂಗ್ರೆಸ್ಸಲ್ಲಿ ಬಿಕ್ಕಟ್ಟಿಗೆ ಕಾರಣವಾಗುತ್ತಿದ್ದಂತೆ, ತನ್ವೀರ್ ಸೇಠ್‍ಗೆ ಡಿಕೆಶಿ ಬುಲಾವ್ ನೀಡಿದ್ದಾರೆ. ತನ್ವೀರ್ ಸೇಠ್ ಸೋಮವಾರ ಭೇಟಿ ನೀಡುವ ಸಾಧ್ಯತೆಗಳಿವೆ. ಈ ನಡುವೆ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಬೆಂಬಲಿಗರೂ ಸೆಟೆದು ನಿಂತಿದ್ದಾರೆ.

ತನ್ವೀರ್ ಸೇಠ್‍ಗೇನಾದ್ರೂ ನೊಟೀಸ್ ನೀಡಿದರೆ ರಾಜೀನಾಮೆ ಕೊಡ್ತೀವಿ ಎಂದು ಎನ್‍ಆರ್ ಕ್ಷೇತ್ರದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸೇಠ್ ಮನೆ ಮುಂದೆ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ತನ್ವೀರ್ ಸೇಠ್‍ಗೆ ಕರೆ ಮಾಡಿದ್ದ ಸಿದ್ದರಾಮಯ್ಯ, ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *