– ನಾಯಕ ಎನ್ನುತ್ತಿದ್ದವರು ಈಗ ಮಾಜಿ ಸಿಎಂನಿಂದ ದೂರ ದೂರ
– ಒಂದೊಂದು ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಗುಟುರು
– ಯಾರ ಬಣ ಸೇರದ ಯುಟಿ ಖಾದರ್
ಬೆಂಗಳೂರು: ಚಾಮರಾಜಪೇಟೆಯ ಶಾಸಕ ಜಮೀರ್ ಮೇಲಿನ ಪ್ರೀತಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮುಳುವಾಗುತ್ತಿದ್ಯಾ? ಸಿದ್ದರಾಮಯ್ಯ ವಿರುದ್ಧ ಮುಸ್ಲಿಮ್ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಪಕ್ಷದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಯಿಂದ ಈ ಪ್ರಶ್ನೆ ಎದ್ದಿದೆ. ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್, ನಜೀರ್ ಅಹಮ್ಮದ್ ಬಿಟ್ಟು ಉಳಿದ ಮುಸ್ಲಿಮ್ ನಾಯಕರು ಸಿದ್ದರಾಮಯ್ಯ ಅವರಿಂದ ದೂರವಾಗಿದ್ದಾರೆ.
ಅಹಿಂದ ಬಾವುಟ ಹಾರಿಸಿಕೊಂಡು ಕೈ ಹಿಡಿದಿದ್ದ ಸಿಎಂ ಇಬ್ರಾಹಿಂ ಸಿದ್ದರಾಮಯ್ಯರಿಂದ ದೂರವಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಸಿಟ್ಟಿನಿಂದಲೇ `ಕೈ’ಬಿಟ್ಟು ಜೆಡಿಎಸ್ ಸೇರಲು ತಯಾರಾಗಿದ್ದಾರೆ.
ಸಿದ್ದರಾಮಯ್ಯ ನಮ್ಮ ನಾಯಕ ಎನ್ನುತ್ತಿದ್ದ ಹ್ಯಾರಿಸ್ ಕೂಡ ದೂರವಾಗಿದ್ದಾರೆ. ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಚುನಾವಣೆ ವಿಚಾರದಲ್ಲಿ ಮಗನನ್ನು ಬೆಂಬಲಿಸದ್ದಕ್ಕೆ ಸಿದ್ದರಾಮಯ್ಯ ಮೇಲೆ ಹ್ಯಾರಿಸ್ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇಷ್ಟು ದಿನ ನಮ್ಮ ಸಾಹೆಬರು ಎನ್ನುತ್ತಿದ್ದ ತನ್ವೀರ್ ಸೇಠ್ ಸಹಾ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಡಬ್ಬಲ್ ಸ್ಟಾಂಡರ್ಡ್ ಎಂದು ತನ್ವೀರ್ ಸೇಠ್ ಮುನಿಸಿಕೊಂಡಿದ್ದಾರೆ.
ಶಿವಾಜಿನಗರದ ಶಾಸಕ ರೋಶನ್ ಬೇಗ್ ಮುನಿಸಿಕೊಂಡು ಪಕ್ಷ ಬಿಡಲು ಸಿದ್ದರಾಮಯ್ಯ ಅವರ ವರ್ತನೆಯೇ ಕಾರಣ. ಆದರೆ ಎಲ್ಲರ ಸಿಟ್ಟಿನ ಮೂಲ ಸಿದ್ದರಾಮಯ್ಯ ನೆರಳಿನಂತೆ ಹಿಂದೆ ಮುಂದೆ ತಿರುಗುವ ಶಾಸಕ ಜಮೀರ್ ಅಹಮ್ಮದ್ ಖಾನ್. ಜಮೀರ್ ಅಹಮ್ಮದ್, ರಿಜ್ವಾನ್, ನಜೀರ್ ಅಹಮ್ಮದ್ ಮೂವರನ್ನು ಬಿಟ್ಟು ಬೇರೆ ಯಾವ ಮುಸ್ಲಿಂ ನಾಯಕರಿಗೂ ಸಿದ್ದರಾಮಯ್ಯ ಕ್ಯಾರೇ ಎನ್ನುತ್ತಿಲ್ಲ. ಈ ಎಲ್ಲ ಕಾರಣದಿಂದ ಮುಸ್ಲಿಮ್ ನಾಯಕರು ಸಿದ್ದರಾಮಯ್ಯನವರಿಂದ ದೂರವಾಗುತ್ತಿದ್ದಾರೆ.
ಸಿದ್ದರಾಮಯ್ಯನವರ ವಿಚಾರದಲ್ಲಿ ಮುಸ್ಲಿಂ ನಾಯಕರ ಮಧ್ಯೆ ಅಪಸ್ವರ ಎದ್ದರೂ ಮಂಗಳೂರಿನ ನಾಯಕ, ಉಳ್ಳಾಲದ ಶಾಸಕ ಯು.ಟಿ.ಖಾದರ್ ಪಕ್ಷದ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದಾರೆ. ಯಾರ ಪರವು ಒಲವು ಹೊಂದದೇ ಪಕ್ಷದ ಪರವಾಗಿ ತನ್ನ ನಿಲುವು ಹೊಂದಿದ್ದಾರೆ. ನನ್ನದು ಅಜೆಂಡಾ ಹಾಗೂ ಝಂಡಾ ಎರಡು ಕಾಂಗ್ರೆಸ್ ಎಂಬ ಧೋರಣೆ ತೋರಿಸುತ್ತಿದ್ದಾರೆ.