– ಕಂಪನಿ ಅಧ್ಯಕ್ಷರ ಜೊತೆ ಡಿಸಿಎಂ ಮಾತುಕತೆ
ಬೆಂಗಳೂರು: ಲ್ಯಾಪ್‍ಟಾಪ್, ಟ್ಯಾಬ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನೊಯ್ಡಾ ಮೂಲದ ಡಿಕ್ಸನ್ ಕಂಪನಿ, ರಾಜ್ಯದಲ್ಲಿ ತಯಾರಿಕಾ ಘಟಕ ಆರಂಭ ಮಾಡಲು ಮುಂದೆ ಬಂದಿದ್ದು, ಈ ಬಗ್ಗೆ ಐಟಿ, ಬಿಟಿ, ಎಲೆಕ್ಟ್ರಾನಿಕ್ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಕಂಪನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ನಗರದಲ್ಲಿ ಇಂದು ಡಿಕ್ಸನ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಸುನಿಲ್ ವಚಾನಿ ಅವರು ಡಿಸಿಎಂ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಅಗತ್ಯ ಜಾಗ ಹಾಗೂ ಇತರೆ ಅಂಶಗಳ ಬಗ್ಗೆ ಬೇಡಿಕೆ ಇಟ್ಟಿದ್ದು, ಕಂಪನಿಯ ಪ್ರಸ್ತಾವನೆಗೆ ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ, ಜಮೀನು ಕೊಡುವ ಭರವಸೆ ನೀಡಿದರು.
ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣಾ (ಇಎಸ್‍ಡಿಎಂ) ಇಲಾಖೆಯ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಕೋಲಾರ ಜಿಲ್ಲೆಯ ಮಾಸ್ತೇನಹಳ್ಳಿ, ಮಿಂಡೇನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು, ರಾಮನಗರ ಜಿಲ್ಲೆಯ ಹಾರೋಹಳ್ಳಿ ಇಷ್ಟು ಜಾಗಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ ತಯಾರಿಕಾ ಘಟಕವನ್ನು ಡಿಕ್ಸನ್ ಕಂಪನಿ ಸ್ಥಾಪನೆ ಮಾಡಲು ಜಮೀನು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕಂಪನಿಯು 10ರಿಂದ 15 ಎಕರೆಯಷ್ಟು ಭೂಮಿಗೆ ಬೇಡಿಕೆ ಇಟ್ಟಿದೆ. ಇಎಸ್‍ಡಿಎಂ ನೀತಿಯ ಪ್ರಕಾರ ಬೆಂಗಳೂರಿನ ಹೊರಗೆ ಮೇಲೆ ತಿಳಿಸಿದ ಯಾವುದೇ ಜಾಗದಲ್ಲಿ ಕಂಪನಿ ತನ್ನ ಘಟಕವನ್ನು ಸ್ಥಾಪನೆ ಮಾಡಿದರೆ ಸರಕಾರದಿಂದ ಸಿಗಲಿರುವ ಎಲ್ಲ ಸಬ್ಸಿಡಿ, ಪ್ರಯೋಜನಗಳು ದೊರೆಯಲಿವೆ. ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆಯೂ ಕಂಪನಿಗೆ ಮನವರಿಕೆ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಸುಮಾರು 30 ಸಾವಿರ ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಡಿಕ್ಸನ್ ಕಂಪನಿ, ಲ್ಯಾಪ್‍ಟಾಪ್, ಟ್ಯಾಬ್, ಡೆಸ್ಕ್ ಟಾಪ್, ಸಿಎಫ್‍ಎಲ್ ಬಲ್ಬ್ ಗಳು, ಎಲ್‍ಇಡಿ ಟಿವಿಗಳು, ಸಿಸಿಟಿವಿ, ವಾಷಿಂಗ್ ಮಷೀನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅತುಲ್ ಲಾಲ್, ಐಟಿ, ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಡಿಸಿಎಂ ಕಾರ್ಯದರ್ಶಿ ಪಿ.ಪ್ರದೀಪ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದರು.