ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ

Public TV
2 Min Read
limbavali e1614252638898

ಬೆಂಗಳೂರು: ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆಯಿಂದಲೇ ಮಲೆನಾಡು ಭಾಗದ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಮಲೆನಾಡು ಭಾಗದ ಶಾಸಕರ ಸಭೆ ಕರೆದಿದ್ದೆ. ಮಲೆನಾಡು ಭಾಗದ ಅರಣ್ಯಕ್ಕೆ ಸಂಬಂಧಿಸಿದ ಸಭೆ ಕರೆಯುತ್ತೇನೆ ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಭರವಸೆ ಕೊಟ್ಟಿದ್ದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜೆಡಿಎಸ್ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಇಪ್ಪತ್ತು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

forest

ಮಲೆನಾಡಿನ ಕೆಲವು ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಡೆತಡೆ ಕೂಡಾ ಇದೆ. ರಾಷ್ಟ್ರೀಯ ಅರಣ್ಯಕ್ಕೆ ಒಳಪಟ್ಟಿದ್ದರೆ ಕೇಂದ್ರದ ಅನುಮತಿ ಪಡೆಯಬೇಕು. ಇದು ರಾಜ್ಯದ ಪ್ರದೇಶವಾಗಿದ್ದರೆ ನಮ್ಮ ಅರಣ್ಯಾಧಿಕಾರಿಗೆ ಇದರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ ಎಂದರು.

ಹಕ್ಕು ಪತ್ರ ವಿತರಣೆ : ಅರಣ್ಯ ವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ವ್ಯವಸ್ಥೆ ಯನ್ನು ಕಂದಾಯ ಇಲಾಖೆ ಜೊತೆಗೂಡಿ ಮಾಡುತ್ತೇವೆ ಎಂದು ತಿಳಿಸಿದರು. ಉತ್ತರ ಕನ್ನಡ ಭಾಗದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಕೆಲವು ಅರಣ್ಯ ಗಳಲ್ಲಿ ಇರುವ ಗ್ರಾಮಗಳು ಕಾಡಿನಿಂದ ಹೊರಗೆ ಸ್ಥಳಾಂತರಿಸಲು ಹಣಕಾಸಿನ ಕೊರತೆ ಇದೆ ಎಂದ ಸಚಿವರು, ಸ್ಥಳಾಂತರಕ್ಕೆ ಅರಣ್ಯ ಗ್ರಾಮ ವಾಸಿಗಳು ಒಪ್ಪಿದ್ದಾರೆ. ಮುಂದಿನ ಬಜೆಟ್ ನಲ್ಲಿ ಹಣ ಮಂಜೂರಾದರೆ ಈ ಕಾರ್ಯವನ್ನು ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.

bandipur forest 1

ಆನೆ ಕಾರಿಡಾರ್ : ಆನೆ ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸಾಕಷ್ಟು ಮಂದಿ ಇದರಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆನೆ ಕಾರಿಡಾರ್ ಸುತ್ತ ರೈಲು ಕಂಬಿಗಳನ್ನು ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದೇವೆ. ಇದನ್ನು ಸಂಪೂರ್ಣವಾಗಿ ಮುಗಿಸುವ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಸಚಿವ ಮತ್ತು ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ವರದಿಯನ್ನು ಒಪ್ಪಿಲ್ಲ : ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ, ಅದರ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವ ಲಿಂಬಾವಳಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *