– 2030ರಿಂದ 2031ಕ್ಕೆ ಆರೆಂಜ್ ಲೈನ್ ಪ್ರಾಜೆಕ್ಟ್ ವಿಸ್ತರಣೆ
ಬೆಂಗಳೂರು: ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದ ಬೆಂಗಳೂರಿನ ಆರೆಂಜ್ ಲೈನ್ ಮೆಟ್ರೋ (Orange Line Metro) ಸಂಬಂಧ ಕಹಿ ಸುದ್ದಿ ಹೊರ ಬಿದ್ದಿದೆ. ಈ ಮಾರ್ಗದ ಕಾಮಗಾರಿ ಆರಂಭಕ್ಕೂ ಮುನ್ನವೇ ಮುಕ್ತಾಯದ ಅವಧಿಯನ್ನು 2030ರಿಂದ 2031ಕ್ಕೆ ವಿಸ್ತರಣೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ (PM Modi), ಹಳದಿ ಲೈನ್ ಮೆಟ್ರೋ ಉದ್ಘಾಟನೆ ಮಾಡಿ ಅದೇ ದಿನ ಆರೆಂಜ್ ಲೈನ್‌ಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇದೀಗ ಬಹುನಿರೀಕ್ಷಿತ ಮಾರ್ಗದ ಕಾಮಗಾರಿ ಮುಕ್ತಾಯದ ಸಮಯಾವಕಾಶ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ. ಈ ಮೂಲಕ 2030ಕ್ಕೆ ಮುಕ್ತಾಯವಾಗಬೇಕಿದ್ದ ಮಾರ್ಗಕ್ಕೆ ಹೆಚ್ಚುವರಿ ಒಂದು ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಮೋದಿ ಸಂಚಾರಕ್ಕೆ ಜಿನ್‌ಪಿಂಗ್ ಮೆಚ್ಚಿನ ಕಾರು ನೀಡಿದ ಚೀನಾ!
ಈ ವಿಳಂಬದಿಂದ ಯೋಜನೆಯ ವೆಚ್ಚವು 5% ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಾಗುವ ಸಂಭವವಿದೆ. 44.65 ಕಿ.ಮೀ ಉದ್ದದ ಈ ಮಾರ್ಗವನ್ನ ಎರಡು ಫೇಸ್‌ಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಾರಣ ಡಬ್ಬಲ್ ಡೆಕ್ಕರ್ ನಿರ್ಮಾಣ ಮಾಡಬೇಕಿರೋ ಹಿನ್ನೆಲೆ ಹೆಚ್ಚುವರಿ ಸಮಯ ಬೇಕಾಗಲಿದೆ. ಇದೇ ಕಾರಣಕ್ಕೆ ಸದ್ಯ ಮಾರ್ಗದ ಪ್ರಾಜೆಕ್ಟ್ ಮುಕ್ತಾಯ 2031ರ ಸಮಯ ತೆಗೆದುಕೊಳ್ಳಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 15,611 ಕೋಟಿ ರೂ. ಗಳಾಗಿದ್ದು, ವಿಳಂಬದಿಂದ ಈ ವೆಚ್ಚ 5% ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
2021ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿ ಸಮಗ್ರ ಯೋಜನಾ ವರದಿ(ಡಿಪಿಆರ್)ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕಳೆದ ವರ್ಷ ಅನುಮೋದನೆ ನೀಡಿತ್ತು. ಜಪಾನ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯಿಂದ 6,770 ಕೋಟಿ ರೂ. ಸಾಲದ ಒಪ್ಪಂದವು ನವೆಂಬರ್‌ನಲ್ಲಿ ಏರ್ಪಡಲಿದೆ. ಈ ಅನುದಾನವು ರೈಲ್ವೆ ಬೋಗಿಗಳ ವೆಚ್ಚ ಮತ್ತು ಇತರ ಕಾಮಗಾರಿಗಳಿಗೆ ಬಳಕೆಯಾಗಲಿದೆ.
ಒಟ್ಟಾರೆ ಮಾರ್ಗದ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯವಾಗಬೇಕಾದರೆ, ಸದ್ಯದ ಅಂದಾಜಿನ ಪ್ರಕಾರ 2031ರ ಮೇ ಎನ್ನಲಾಗ್ತಿದೆ. ಆದರೆ ಯಲ್ಲೋ ಮಾರ್ಗದಲ್ಲಾದಂತ ಸಮಸ್ಯೆಯಾದ್ರೆ, ಹೆಚ್ಚುವರಿ ಸಮಯ ಮೀರಿ, ಇನ್ನಷ್ಟು ಸಮಯ ತೆಗೆದುಕೊಂಡರು ಅಚ್ಚರಿ ಪಡಬೇಕಿಲ್ಲ.