ರಾಯಚೂರು: ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿಮಾಡಿ, ಇಬ್ಬರು ಆರೋಪಿಗಳನ್ನ ಬಂಧಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮೂರು ಪ್ರತ್ಯೇಕ ಪ್ರಕರಣದಲ್ಲಿ ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ ಹಾಗು ಗಾಂಜಾ ಜಪ್ತಿ ಮಾಡಲಾಗಿದೆ. ದೇವದುರ್ಗ ತಾಲೂಕಿನ ನಾರಬಂಡಿ ತಾಂಡಾದಲ್ಲಿ ಕಳ್ಳಭಟ್ಟಿ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು 15 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಾಯಚೂರು ನಗರದ ಅಶೋಕ ನಗರದಲ್ಲಿ ಚಿಕ್ಕ ಪ್ಯಾಕೇಟ್‍ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಗಾಂಜಾ ಸಹಿತ ಬಂಧಿಸಲಾಗಿದೆ. 150 ಪ್ಯಾಕೇಟ್ ನಲ್ಲಿದ್ದ 1 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಆರೋಪಿ ಅಹ್ಮದ್ ಹುಸೇನ್‍ನನ್ನು ಬಂಧಿಸಲಾಗಿದೆ.
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬೈಕ್‍ನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಗುಂಜಳ್ಳಿ ಕ್ಯಾಂಪ್‍ನ ಹನುಮಂತನನ್ನ ಬಂಧಿಸಲಾಗಿದ್ದು, 13.590 ಲೀಟರ್ ಮದ್ಯ ಜಪ್ತಿಮಾಡಲಾಗಿದೆ. ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.