ಬೆಂಗಳೂರು: ನಾನು ಸೂಪರ್ ಸಿಎಂ ಅಲ್ಲ. ನಾನು ಸಿಎಂ ಯಡಿಯೂರಪ್ಪವರ ಯಾವುದೇ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಿಎಂ ಪುತ್ರ ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯತ್ನಾಳ್ ವಿರುದ್ಧ ಕಿಡಿಕಾರಿದ ಅವರು, ನಾನು ಪಕ್ಷದ ಕಾರ್ಯಕರ್ತ ಹಾಗೂ ರಾಜ್ಯ ಉಪಾಧ್ಯಕ್ಷ. ಪಕ್ಷ ಸಂಘಟನೆಗೆ ನಾನು ಕೆಲಸ ಮಾಡ್ತಿದ್ದೇನೆ. ನನ್ನ ಇತಿಮಿತಿ ಏನು ಅಂತ ನನಗೆ ಗೊತ್ತಿದೆ. ತಂದೆಯವರ ಕೆಲಸದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಗರಂ ಆದರು.
ಅನೇಕ ಬಾರಿ ನನ್ನ ಬಗ್ಗೆ ಚರ್ಚೆ ಆಗುತ್ತಿದೆ. ಯಾರೋ ಒಬ್ಬರು ಮಾತಾಡ್ತಾರೆ ಅಂತ ನಾನು ಮಾತಾಡೊಲ್ಲ. ಕಾರ್ಯಕರ್ತರ ಪರಿಶ್ರಮದಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾನು ಸಿಎಂ ಮಗ, ಆದರೂ ಪಕ್ಷದ ಕಾರ್ಯಕರ್ತ, ರಾಜ್ಯ ಉಪಾಧ್ಯಕ್ಷ. ನನ್ನ ಇತಿಮಿತಿ ನನಗೆ ಅರಿವಿದೆ. ನಾನು ಯಾರನ್ನೋ ಮಂತ್ರಿ ಮಾಡಲು, ಯಾವುದೇ ಕೆಲಸದಲ್ಲಿ ಮೂಗು ತೂರಿಸುವ ಕೆಲಸ ಮಾಡಿಲ್ಲ. ಪಕ್ಷ ಬಲವರ್ಧನೆಗೆ ನಾನು ಕೆಲಸ ಮಾಡ್ತಿದ್ದೇನೆ ಎಂದರು.
ಬಸವಕಲ್ಯಾಣದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರು ನನಗೆ ಮಸ್ಕಿ ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ. ನಾನು ಅಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡದೇ ಮಸ್ಕಿ ಕ್ಷೇತ್ರ ಕೆಲಸ ಮಾಡ್ತೀನಿ ಎಂದರು.
ಪದೇ ಪದೇ ನಿಮ್ಮ ಹೆಸರು ಹೇಳುತ್ತಿರೋ ವಿಚಾರದ ಕುರಿತು ಮಾತನಾಡಿದ ಅವರು, ಯತ್ನಾಳ್ ಅನೇಕ ಬಾರಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯತೆ ಇಲ್ಲ. ರಾಷ್ಟ್ರೀಯ ನಾಯಕರು ಈಗಾಗಲೇ ನೊಟೀಸ್ ಕೊಟ್ಟಿದ್ದಾರೆ. ಉತ್ತರ ಕೊಟ್ಟ ಮೇಲೆ ಏನ್ ಆಗುತ್ತೋ ನೋಡೋಣ ಎಂದು ಹೇಳಿದರು.
ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಪಕ್ಷ ಏನೇ ಕೆಲಸ ಕೊಟ್ಟರು ಅದನ್ನು ನಿಭಾಯಿಸೋದು ನನ್ನ ಕರ್ತವ್ಯ. ಅದನ್ನ ನಾನು ಮಾಡ್ತೀನಿ. ಅಲ್ಲೊಬ್ಬರು, ಇಲ್ಲೊಬ್ಬರು ನನ್ನ ವಿರುದ್ದ ಮಾತಾಡ್ತಿದ್ದಾರೆ. ಆದರೆ ನನ್ನ ಕೆಲಸ, ಕರ್ತವ್ಯ ಏನು ಅನ್ನೋ ಅರಿವು ನನಗೆ ಇದೆ. ಇದರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡಲ್ಲ. ರಾಜ್ಯದ ಜನತೆಗೆ ಯಡಿಯೂರಪ್ಪ ಯಶಸ್ವಿಯಾಗಿ ಅವಧಿ ಪೂರ್ಣ ಮಾಡುವ ಆಸೆ ಇದೆ. ಯಡಿಯೂರಪ್ಪನವರು ತಮ್ಮ ಅವಧಿ ಸಂಪೂರ್ಣಗೊಳಿಸುತ್ತಾರೆ. ರಾಜ್ಯಕ್ಕೆ ಒಳ್ಳೆ ಕೆಲಸ ಮಾಡ್ತಾರೆ ಎಂದು ತನ್ನ ವಿರುದ್ಧ ಕೆಲಸ ಶಾಸಕರು ವಿರೋಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಸಿಎಂಗಳಿಗೆ ಸ್ವಾಮೀಜಿಗಳ ಬೆದರಿಕೆ ಬಗ್ಗೆ ಮಾತನಾಡಿ, ಶಬ್ದಗಳ ಬಳಕೆಯಲ್ಲಿ ವ್ಯತಾಸ ಇರಬಹುದು. ಆದರೆ ಹೇಳಿಕೆಗೆ ಬೆದರಿಕೆ ಉದ್ದೇಶ ಇಲ್ಲ. ಸಾಮಾಜಿಕ ಕಳಕಳಿಯಿಂದ ಆ ರೀತಿ ಹೇಳಿರಬಹುದು ಎಂದರು.