ಚಿಕ್ಕಬಳ್ಳಾಪುರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ಸಾವನ್ನಪ್ಪಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಅಗಲಗುರ್ಕಿ ಗೇಟ್ ಬಳಿ ಘಟನೆ ನಡೆದಿದೆ. ಬಾಗೇಪಲ್ಲಿ ತಾಲೂಕು ಮೂಗಚಿನ್ನೇಪಲ್ಲಿ ಗ್ರಾಮದ ಕೃಷ್ಣಪ್ಪ ಮೃತ ವ್ಯಕ್ತಿ. ಬಾಗೇಪಲ್ಲಿ ಯಿಂದ ಚಿಕ್ಕಬಳ್ಳಾಪುರಕ್ಕೆ ಬೈಕ್‍ನಲ್ಲಿ ಬರುತ್ತಿದ್ದ ರಾಮಾಂಜಿನಪ್ಪ ಹಾಗೂ ಕೃಷ್ಣಪ್ಪ ಬೈಪಾಸ್ ರಸ್ತೆಯ ಅಗಲಗುರ್ಕಿ ಗೇಟ್ ಬಳಿ ಚಿಕ್ಕಬಳ್ಳಾಪುರದ ಕಡೆಗೆ ಯೂಟರ್ನ್ ತೆಗೆದುಕೊಳ್ಳುವಾಗ ಅಪಘಾತ ಸಂಭವಿಸಿದೆ.
ಕಾರು ಬರೋದು ಗಮನಿಸದೆ ಏಕಾಏಕಿ ಯೂ ಟರ್ನ್ ತಡಗೆದುಕೊಂಡ ಪರಿಣಾಮ ಎದುರು ರಸ್ತೆಯಲ್ಲಿ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರಾಮಾಂಜಿನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಿಂಬದಿ ಸವಾರ ಕೃಷ್ಣಪ್ಪ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತ ವ್ಯಕ್ತಿ ಬೋರ್ ವೆಲ್ ಕೊರೆಯಲು ವಾಟರ್ ಪಾಯಿಂಟ್ ನೋಡುವ ಕಾಯಕ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.