ಮಡಿಕೇರಿ: ಕತ್ತಿ, ದೊಣ್ಣೆ ಗುದ್ದಲಿಗಳಿಂದ ಗಿಡಗಂಟಿಗಳನ್ನು ಕಡಿದು, ಕಸ ತೆಗೆದು ಹಾಕಿ ಗ್ರಾಮವನ್ನು ಪೊಲೀಸರು ಸ್ವಚ್ಛಗೊಳಿಸಿದ್ದು, ಪೊಲೀಸರ ಈ ಕಾರ್ಯವನ್ನು ಮೆಚ್ಚಿದ ಇದೀಗ ಗ್ರಾಮಸ್ಥರು ಹಾಡಿ ಹೊಗಳುತ್ತಿದ್ದಾರೆ.
ಸದಾ ಲಾಠಿ, ಬಂದೂಕು ಹಿಡಿದು ಓಡಾಡುತ್ತಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಪೊಲೀಸ್ ಸಿಬ್ಬಂದಿ ಇಂದು ಬೆಳಿಗ್ಗೆ ಪೊಲೀಸ್ ಠಾಣೆ ವಸತಿ ಗೃಹ ಹಾಗೂ ಗ್ರಾಮದ ರಸ್ತೆಯಲ್ಲಿ ಕತ್ತಿ, ದೊಣ್ಣೆ ಗುದ್ದಲಿಗಳನ್ನು ಹಿಡಿದು ಗಿಡಗಂಟಿಗಳನ್ನು ಕಡಿದು, ಕಸವನ್ನು ತೆಗೆಯುವ ಮೂಲಕ ಸ್ವಚ್ಛ ಕಾರ್ಯ ಮಾಡಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆಗೆ ಪೊಲೀಸ್ ವಸತಿ ಗೃಹದ ಪೊಲೀಸರು ತಮ್ಮ ಸಮವಸ್ತ್ರಗಳನ್ನು ಕಳಚಿ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಸುತ್ತಮುತ್ತಲಿರುವ ಕಸಗಳನ್ನು ಸ್ವಚ್ಛಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಠಾಣೆಗೆ ತೆರಳುವ ಮಾರ್ಗ ಹಾಗೂ ಸುತ್ತ ಬೆಳೆದಿದ್ದ ಕುರುಚಲು ಕಾಡುಗಳನ್ನು ಕಳೆ ಕೊಂಚುವ ಯಂತ್ರಗಳಿಂದ ಸ್ವಚ್ಛಗೊಳಿಸಿದರು.
ಗ್ರಾಮ ಪಂಚಾಯತಿ ಅವರೇ ಸ್ವಚಗೊಳಿಸಲಿ ಎಂದು ಕಾಯದೇ ಮಹಿಳಾ ಸಿಬ್ಬಂದಿಗಳು ಕುಕ್ಕೆ ಹಿಡಿದು ಶ್ರಮದಾಮ ಮಾಡಿದ್ದಾರೆ. ಜೊತೆಗೆ ಒಳಚರಂಡಿ ಭರ್ತಿಯಾಗಿರುವುದನ್ನು ಗಮನಿಸಿದ ಸಿಬ್ಬಂದಿ ಸ್ವಚ್ಛತೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.