ದಾವಣಗೆರೆ: ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರವೇ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ತಮ್ಮ ಮನಸ್ಸು, ಶ್ರೀಗಳ ಮಾತನ್ನು ಅರ್ಥೈಸಿಕೊಳ್ಳಲು ಆಗಮಿಸಿದ್ದೇನೆ. ಅವರ ಆಶಯ ಪೂರೈಸೋದು ನಮ್ಮ ಕರ್ತವ್ಯ. ಬಹುದಿನಗಳ ಬೇಡಿಕೆಯಾಗಿರುವ ಎಸ್‍ಟಿ ಮೀಸಲಾತಿ ಪ್ರಮಾಣದ ಹೆಚ್ಚಳದ ಕುರಿತು ವಾಲ್ಮೀಕಿ ಸ್ವಾಮೀಜಿಗಳಿಗೆ ಸತ್ಯಾಗ್ರಹ, ಹೋರಾಟಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ನಾಗಮೋಹನ್ ದಾಸ್ ವರದಿ ಸರ್ಕಾರದ ಕೈ ಸೇರಿದೆ. ವರದಿಯನ್ನು ಜಾರಿಗೆ ತರುತ್ತೇವೆ. ಈ ಬಗ್ಗೆ ಸ್ವಾಮೀಜಿ ಯಾವುದೇ ಅತಂಕ ಪಡುವುದು ಬೇಡ, ಹೋರಾಟ ಮಾಡುವುದು ಸಹ ಬೇಡ ಎಂದು ತಿಳಿಸಿದರು. ಭಾಷಣ ಮುಗಿಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ವೇದಿಕೆಯಿಂದ ಹೊರಟರು.
ಜಾತ್ರೆಯಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನನಂದಪುರಿ ಸ್ವಾಮೀಜಿ, ಸಚಿವರಾದ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಆನಂದಸಿಂಗ್, ಭೈರತಿ ಬಸವರಾಜ್, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ತುಕಾರಾಂ, ಜಿ.ಟಿ.ದೇವೇಗೌಡ, ಶಾಸಕರಾದ ರೇಣುಕಾಚಾರ್ಯ, ರಾಮಚಂದ್ರ, ಸಂಸದ ಜಿ.ಎಂ.ಸಿದ್ದೇಶ್ ಭಾಗಿಯಾಗಿದ್ದರು.