ಹಾಸನ: ಸುಮಾರು 50 ವರ್ಷ ಪೂರೈಸಿರೋ ಹಾಸನ ಜಿಲ್ಲೆಯ ಜೀವನಾಡಿ ಹೇಮಾವತಿ ಅಣೆಕಟ್ಟಿಗೆ ಈಗ ಆತಂಕ ಎದುರಾಗಿದೆ. ಜಿಲ್ಲೆಯ ಗೊರೂನಲ್ಲಿರೋ ಹೇಮಾವತಿ ಜಲಾಶಯದ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು ಡ್ಯಾಂಗೆ ಅಸುರಕ್ಷತೆ ಭೀತಿ ತಂದೊಡ್ಡಿದೆ. ಹಾಸನ ತಾಲೂಕಿನ ಕಟ್ಟಾಯ, ಹನುಮನಹಳ್ಳಿ, ನ್ಯಾಮನಹಳ್ಳಿ, ಹಂಗರಹಳ್ಳಿ ಸೇರಿದಂತೆ ಡ್ಯಾಂನ ಸುತ್ತಮುತ್ತಲೂ ಗಣಿಗಾರಿಕೆ ಮಾಡುತ್ತಿದ್ದು, ಸ್ಫೋಟಕಗಳನ್ನು ಸಿಡಿಸುತ್ತಿದ್ದಾರೆ.
ಇತ್ತೀಚೆಗೆ ಡ್ಯಾಂನ ಕೂಗಳತೆ ದೂರದ ಅರಣ್ಯದಲ್ಲಿ ಪೊಲೀಸರು ಹಾಗೂ ಐಎಸ್‍ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ರು. ಅಕ್ರಮವಾಗಿ ದಾಸ್ತಾನು ಮಾಡಿದ್ದ 1,200 ಜಿಲೆಟಿನ್ ಟ್ಯೂಬ್, 2 ಡೀಟೇನೇಟರ್, 10 ಕೆ.ಜಿ ಅಮೋನಿಯಂ ನೈಟ್ರೈಟ್ ವಶಪಡಿಸಿಕೊಂಡಿದ್ರು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂದೊಂದು ದಿನ ಡ್ಯಾಂಗೆ ಕಂಟಕ ಕಾದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೂ ದೂರ ನೀಡಲಾಗಿದೆ. ಶೀಘ್ರ ಕ್ರಮವಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸೊದಾಗಿ ಕಾಂಗ್ರೆಸ್ ಮುಖಂಡ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಸ್‍ಪಿ ಶ್ರೀನಿವಾಸಗೌಡ ಅವರನ್ನು ಕೇಳಿದ್ರೆ, ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಗಳಿಗೆ ಲೈಸೆನ್ಸ್ ಪಡೆದಿದ್ದಾರೆ. ಈ ಬಗ್ಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೇಳಿದ್ದೇವೆ. ಜಿಲ್ಲಾಡಳಿತದ ಅನುಮತಿ ಪಡೆದೇ ಲೈಸೆನ್ಸ್ ನೀಡಿರಲಾಗುತ್ತೆ. ಅದು ಅವರ ಇಲಾಖೆಗೆ ಬಿಟ್ಟಿದ್ದು, ಅಕ್ರಮವಾಗಿ ನಡೆಸುತ್ತಿದ್ದುವುಗಳ ಮೇಲೆ ನಾವು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಗಣಿಗಾರಿಕೆ ನಡೆಸೋದಕ್ಕೆ ಲೈಸೆನ್ಸ್ ಪಡೆದರೂ, ಸ್ಫೋಟಿಸೋದಕ್ಕೆ ಅನುಮತಿ ಇರೋದೇ ಇಲ್ಲ. ಅಂತಹ ಕಡೆಗಳಲ್ಲಿಯೂ ಸ್ಫೋಟಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರ್ತಿವೆ. ಹೇಮಾವತಿ ಡ್ಯಾಂಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಹಾಗೂ ಸರ್ಕಾರ ಕ್ರಮವಹಿಸಬೇಕಿದೆ.