ನವದೆಹಲಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯ ದೆಹಲಿಯಲ್ಲಿ ನಡೆಯುತ್ತಿದೆ. ಈ ನಿರ್ಮಾಣ ಕಾರ್ಯವನ್ನು ರಾಜ್ಯದ ಡಿಸಿಎಂ ಅಶ್ವಥ್‍ನಾರಾಯಣ ಮತ್ತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ವೀಕ್ಷಿಸಿ ಪರೀಶಿಲನೆ ನಡೆಸಿದ್ದಾರೆ.
ದೆಹಲಿ ಸಮೀಪದ ನೋಯ್ಡಾದಲ್ಲಿ ಪ್ರಸಿದ್ಧ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆಯನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದೆ. ಮೊದಲ ಹಂತದಲ್ಲಿ ಪ್ರತಿಮೆಯನ್ನು ಥರ್ಮಾಕೋಲ್‍ನಲ್ಲಿ ಮಾಡಿ ಏನಾದರೂ ಬದಲಾವಣೆಗಳು ಇದ್ದಲ್ಲಿ ಆ ಸಂದರ್ಭದಲ್ಲೇ ಅದನ್ನು ಸರಿಪಡಿಸಿ, ನಂತರ ಅಂತಿಮವಾಗಿ ಕಂಚಿನ ಪ್ರತಿಮೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಪ್ರತಿಮೆಯನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಪ್ರತಿಷ್ಠಿಸುವ ಗುರಿಯನ್ನು ಹೊಂದಲಾಗಿದೆ.
ಪ್ರತಿಮೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಕೆಂಪೇಗೌಡರ ಪ್ರತಿಮೆಯು 90 ಅಡಿಯ ವಿಗ್ರಹವಾಗಿದ್ದು, 18 ಅಡಿ ತಳಪಾಯ ಸೇರಿ 108 ಅಡಿ ಎತ್ತರದ ಪ್ರತಿಮೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ಪ್ರತಿಮೆ ನಿರ್ಮಾಣದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಅಚ್ಚುಕಟ್ಟಾಗಿ, ಬಹಳ ವೇಗವಾಗಿ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು.
ನಿರ್ಮಾಲಾನಂದನಾಥ ಸ್ವಾಮೀಜಿ ಮಾತನಾಡಿ ಕೊರೊನಾ ಬಂದಿದ್ದರಿಂದ ಪ್ರತಿಮೆ ನಿರ್ಮಾಣಕ್ಕೆ ತೊಡಕಾಗಿದೆ. ಮುಂದಿನ ವರ್ಷವೇ ಪ್ರತಿಮೆ ಅನಾವರಣ ಮಾಡುವ ಗುರಿ ಇಟ್ಟಿಕೊಂಡಿದ್ದೇವು. ಆದರೆ ಇದೀಗಪೂರ್ಣ ಪ್ರಮಾಣದಲ್ಲಿ ಪ್ರತಿಮೆ ಸಿದ್ಧಗೊಳ್ಳಲು ಇನ್ನು ಎಂಟೊಂಬತ್ತು ತಿಂಗಳು ಬೇಕು. ಪ್ರತಿಮೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸುವತ್ತ ಯೋಜನೆ ರೂಪಿಸಿದ್ದೇವೆ. ಪ್ರತಿಮೆಯ ಜೊತೆಗೆ ಕೆಂಪೇಗೌಡರ ಹೆರಿಟೇಜ್ ಪಾರ್ಕ್ ಕೂಡ ನಿರ್ಮಾಣ ಆಗಲಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಮಾಡಿದ್ದ ರಾಮ ಸುತಾರ್ ಅವರೇ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.