ಬೆಂಗಳೂರು: ಅದಾನಿ ಒಡೆತನದ ಪವರ್ ಕಾರ್ಪೋರೇಷನ್ ಗೆ ರಾಜ್ಯ ಸರ್ಕಾರ ಯಾವುದೇ ಹೆಚ್ಚುವರಿ ಹಣ ಕೊಡುತ್ತಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಬದಲಿಗೆ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಸಿಇಆರ್‍ಸಿ ಆದೇಶದ ಅನ್ವಯ ಪ್ರತಿ ಯುನಿಟ್ ಗೆ 1.45 ರೂ. ನಿಗದಿಪಡಿಸಲಾಗಿದೆ. ಕಲ್ಲಿದ್ದಲು, ಸುಣ್ಣದ ಕಲ್ಲು, ತೈಲದರ ಏರಿಳಿತ ಆದಾಗ ದರ ಹೆಚ್ವಳ ಆಗುತ್ತೆ. ಏಪ್ರಿಲ್ 2020 ರಿಂದ ಡಿಸೆಂಬರ್ 2020ರ ವರೆಗೆ ಪ್ರತಿ ಯುನಿಟ್‍ಗೆ ಕನಿಷ್ಠ 2.75 ರೂ. ಹಾಗೂ ಗರಿಷ್ಠ 3.72 ರೂ. ನಿಗದಿಪಡಿಸಲಾಗಿದೆ.
ಕೆಇಆರ್ ಸಿ ಮತ್ತು ಸಿಇಆರ್ ಸಿ ನಿಯಮಾವಳಿ ಪ್ರಕಾರ ನಿಭಾಯಿಸಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿ 1,600 ಕೋಟಿ ರೂ. ನಷ್ಟದಲ್ಲಿದೆ. ಹೆಚ್ಚುವರಿಯಾಗಿ ಯಾವುದೇ ಹಣ ಅದಾನಿ ಕಂಪನಿಗೆ ನೀಡಿಲ್ಲ. ನಿಯಮಗಳ ಅನ್ವಯ ಹಣ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಡಿಎ ನಿರ್ಮಿಸುತ್ತಿರುವ ಸಮುಚ್ಛಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಪ್ರಕಾಶ್ ರಾಥೋಡ್ ಬದಲಿಗೆ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡಿಎದಿಂದ ಸದ್ಯ 31 ವಸತಿ ಸಮುಚ್ಛಯಗಳನ್ನ ನಿರ್ಮಿಸಲಾಗಿದೆ. ಈ ವರೆಗೆ ಸುಮಾರು 7,909 ಫ್ಲಾಟ್ ಮಾರಾಟವಾಗಿದೆ. 1,914 ಫ್ಲಾಟ್ ಮಾತ್ರ ಮಾರಾಟವಾಗದೇ ಬಾಕಿ ಇವೆ. ಅಲ್ಲದೆ ಹೊಸ 5,086 ಕಾಮಗಾರಿ ಚಾಲ್ತಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು. ಮೂಲಭೂತ ಸೌಕರ್ಯ ಇಲ್ಲದ ಕಡೆ ಕೂಡಲೇ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತೆ. ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.