ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ವ್ಯಕ್ತಿಯ ಫೋಟೋ ವೈರಲ್

Public TV
1 Min Read
train 1

ಮುಂಬೈ: ವ್ಯಕ್ತಿಯೊಬ್ಬ ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹೌದು. ಮಹಾಮಾರಿ ಕೊರೊನಾದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಕೆಲ ತಿಂಗಳ ಬಳಿಕ ಲಾಕ್‍ಡೌನ್ ತೆರವಾದರೂ ಕೆಲವೊಂದು ನಿಯಮಗಳು ಜಾರಿಯಲ್ಲಿದ್ದವು. ಅಂತೆಯೇ ಸ್ಥಳೀಯ ರೈಲುಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಬರೋಬ್ಬರಿ 10 ತಿಂಗಳ ಬಳಿಕ ಮುಂಬೈನಲ್ಲಿ ಲೋಕ್ ಟ್ರೈನ್ ಸಂಚಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹತ್ತುವ ಮುನ್ನ ರೈಲಿನ ಬಾಗಿಲಿಗೆ ತಲೆಯಿಟ್ಟು ನಮಸ್ಕರಿಸಿದ್ದಾರೆ. ಇದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

train 2

ವೈರಲ್ ಆದ ಫೋಟೋದಲ್ಲಿ ವ್ಯಕ್ತಿ ಹಳಿಯಲ್ಲಿ ನಿಂತಿದ್ದ ಮುಂಬೈ ಸ್ಥಳೀಯ ರೈಲಿನ ಬಾಗಿಲ ಬಳಿ ಕುಳಿತು, ತನ್ನ ಕೈಗಳನ್ನು ಕೆಳಗಿರಿಸಿ ತಲೆ ಬಾಗಿ ನಮಸ್ಕರಿಸಿ ಗೌರವ ನೀಡಿದ್ದಾನೆ. ಈ ಫೋಟೋವನ್ನು ಹಿಮಾಂಶು ಪರ್ಮಾರ್(@ಮದನ್-ಚಿಕ್ನಾ) ಎಂಬವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 10 ತಿಂಗಳ ನಂತರ ರೈಲನ್ನು ಹತ್ತುವ ಮೊದಲು ಪ್ರಯಾಣಿಕ ನಮಸ್ಕರಿಸುತ್ತಿರುವ ಈ ಫೋಟೋ ನನ್ನ ಮನ ಮುಟ್ಟಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಲೈಕ್ಸ್ ಮತ್ತು ಕಾಮೆಂಟ್‍ಗಳು ಹರಿದು ಬರುತ್ತಿದೆ. ಅಲ್ಲದೆ ವ್ಯಕ್ತಿಯೊಬ್ಬರು ಈ ಫೋಟೋ ಮೂಲಕ ಭಾರತೀಯ ನಾಗರಿಕತೆ ಮತ್ತು ಭಾರತೀಯ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ಮಾರ್ಚ್ 22ರ ಮಧ್ಯರಾತ್ರಿಯಿಂದ ಸ್ಥಗಿತಗೊಂಡಿದ್ದ ಮುಂಬೈ ಸ್ಥಳೀಯ ರೈಲುಗಳಲ್ಲಿ ಮತ್ತೆ ಸಾರ್ವಜನಿಕರು ಪ್ರಯಾಣಿಸಲು ಸೋಮವಾರದಿಂದ ಅವಕಾಶ ನೀಡಲಾಗಿದೆ. ಹೀಗಾಗಿ 10 ತಿಂಗಳ ನಂತರ ಲೋಕಲ್ ಟ್ರೈನ್ ಸಂಚಾರ ಆರಂಭಗೊಂಡಿದ್ದರಿಂದ ಮುಂಬೈ ಮಂದಿಗೆ ಮತ್ತೆ ಜೀವ ಬಂದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *