ಬೀದರ್: ಬಸ್ ನಿಲುಗಡೆಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.
ಹಲವು ದಿನಗಳಿಂದ ಅಣದೂರು ಗ್ರಾಮದಲ್ಲಿ ಸಾರಿಗೆ ಬಸ್ಸುಗಳು ನಿಲ್ಲಿಸದೇ ಸಂಚಾರ ಮಾಡುತ್ತಿದ್ದವು. ಸಾರಿಗೆ ಸಿಬ್ಬಂದಿಯ ಈ ನಡೆಗೆ ರೋಸಿ ಹೋದ ವಿದ್ಯಾರ್ಥಿಗಳು ಇಂದು ಬೆಳಗ್ಗೆಯಿಂದ ಬೀದರ್ ತಾಲೂಕಿನ ಅಣದೂರು ಬಳಿ ಬೀದರ್ – ಕಲಬುರಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಜನವಾಡ ಪಿಎಸ್‍ಐ ಶಿವರಾಜ್ ಪಾಟೀಲ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಕೈ ಬಿಡುವಂತೆ ಹೇಳಿದ್ದಾರೆ. ಪಟ್ಟು ಬಿಡದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಇದರಿಂದಾಗಿ ಸಚಿನ್ ಮಾಲೆ ಎಂಬ ಕಾಲೇಜು ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿದ್ದಾರೆ.
ಪ್ರತಿಭಟನಾ ನಿರತ ಶಾಲಾ – ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಪಿಎಸ್‍ಐ ವಿರುದ್ಧ ಇದೀಗ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.