– ಚಿಕ್ಕಪ್ಪ, ಇನಿಯನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ್ಳು!
ಚಂಡೀಗಢ: ಅಕ್ರಮ ಸಂಬಂಧ ಉಳಿಸಿಕೊಳ್ಳಲು ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಮಹಿಳೆ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿನೇಶ್ ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ವ್ಯಕ್ತಿ. ಜನವರಿ 28ರಂದು ಚರಂಡಿ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮೃತದೇಹ ಸೈನಿಕ್ ಕಾಲೋನಿ ನಿವಾಸಿ ದಿನೇಶ್ ಎಂಬವರದ್ದು ಅಂತ ಗೊತ್ತಾಯ್ತು. ದಿನೇಶ್ ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ನಿತಿನ್ ಹಾಗೂ ಆಕೆಯ ಸಂಬಂಧಕ್ಕೆ ದಿನೇಶ್ ಅಡ್ಡಿಯಾಗುತ್ತಿದ್ದರಿಂದ ತನ್ನ ಚಿಕ್ಕಪ್ಪ ಹರ್ಜೀತ್ ಸಿಂಗ್, ನಿತಿನ್ ಹಾಗೂ ಆತನ ಸ್ನೇಹಿತರೊಂದಿಗೆ ಮಹಿಳೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಜನವರಿ 11 ಹಾಗೂ 12 ಮಧ್ಯರಾತ್ರಿ ಮಹಿಳೆ ಪ್ರಿಯಕರ ನಿತಿನ್, ಆತನ ಸ್ನೇಹಿತರಾದ ವಿನೀತ್ ಮತ್ತು ವಿಷ್ಣು ಕೋಲಿನಿಂದ ದಿನೇಶ್ ಮೇಲೆ ಹಲ್ಲೆ ನಡೆಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬಾತ್ ರೂಂನಲ್ಲಿ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಹರ್ಜೀತ್ ಸಿಂಗ್ ಪಾತ್ರವು ಇದ್ದು ಆತನು ಬರುವುದು ತಡವಾದ್ದರಿಂದ ನಿತಿನ್ ಹಾಗೂ ಆತನ ಸ್ನೇಹಿತರೇ ದಿನೇಶ್‍ನನ್ನು ಕೊಲೆ ಮಾಡಿ ಮುಗಿಸಿ ಬಿಟ್ಟಿದ್ದರು. ಅಲ್ಲದೆ ಈ ಕೊಲೆ ಮಾಡಲು ನಿತಿನ್ ಸ್ನೇಹಿತರಾದ ವಿನೀತ್ ಮತ್ತು ವಿಷ್ಣುವಿಗೆ 41 ಸಾವಿರ ರೂ. ಹಣ ನೀಡಿದ್ದನು.
ಸುಮಾರು ಒಂದು ವಾರದವರೆಗೂ ಪತಿಯ ಶವವನ್ನು ಮಹಿಳೆ ಮನೆಯಲ್ಲಿಯೇ ಇಟ್ಟಿಕೊಂಡಿದ್ದಾಳೆ. ಆದರೆ ಶವ ಜನವರಿ 18ಕ್ಕೆ ದುರ್ವಾಸನೆ ಬರಲು ಆರಂಭವಾಗಿದೆ ಹಾಗಾಗಿ ಮಹಿಳೆ ಮತ್ತೋರ್ವ ಸ್ನೇಹಿತ ದೀಪಕ್ ಜೊತೆ ಸೇರಿ ಶವವನ್ನು ಡಬುವಾ ಪ್ರದೇಶದಲ್ಲಿನ ಚರಂಡಿಗೆ ಎಸೆದಿದ್ದಾಳೆ. ಇದೀಗ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಇತರ ಶಂಕಿತರನ್ನು ಬಂಧಿಸಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.