ಮನೆಗಾಗಿ ಬೆತ್ತಲೆ ಪ್ರತಿಭಟನೆ- ಸರ್ಕಾರ ಮನೆ ಕಟ್ಟಿಕೊಟ್ಟರೂ ಪ್ರವೇಶಿಸದ 49 ಆದಿವಾಸಿ ಕುಟುಂಬಗಳು

Public TV
2 Min Read
mdk tribal home

ಮಡಿಕೇರಿ: ನಮಗೂ ಒಂದು ಮನೆ ಬೇಕೆಂದು ಕೊಡಗಿನ ದಿಡ್ಡಳ್ಳಿಯ ಆದಿವಾಸಿಗಳು 2016 ರಲ್ಲಿ ರಾಷ್ಟ್ರದ ಗಮನಸೆಳೆಯುವಂತೆ ಬೆತ್ತಲೆ ಹೋರಾಟ ಮಾಡಿದ್ದು, ನಂತರ ಸರ್ಕಾರ ಮನೆ ನಿರ್ಮಿಸಿ ವಿತರಣೆ ಮಾಡಿದ್ದು ಗೊತ್ತೇ ಇದೆ. ಆದರೆ ಮನೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಣೆ ಮಾಡಿದ್ದರೂ 49 ಕುಟುಂಬಗಳು ಹೊಸ ಮನೆಗಳಿಗೆ ಪ್ರವೇಶಿಸಿಲ್ಲ. ಹೀಗಾಗಿ ಐಟಿಡಿಪಿ ಇಲಾಖೆ ಈ 49 ಮನೆಗಳನ್ನು ಬೇರೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅವರಿಗೆ ವಿತರಣೆ ಮಾಡಲು ಮುಂದಾಗಿದೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಆದಿವಾಸಿ ಬುಡಕಟ್ಟು ಜನಾಂಗದ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

mdk tribal homes 1

2016 ರಲ್ಲಿ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಹಾಡಿಯ 611 ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿತ್ತು. ಈ ವೇಳೆ ಶಾಶ್ವತ ಸೂರು ಒದಗಿಸದ ಹೊರತು ಅಲ್ಲಿಂದ ಮೇಲೇಳುವುದಿಲ್ಲ ಎಂದು ಬುಡಕಟ್ಟು ಜನರು ತಿಂಗಳುಗಟ್ಟಲೆ ಪ್ರತಿಭಟನೆ ಮಾಡಿದ್ದರು. ಅಷ್ಟೇ ಅಲ್ಲ ಬುಡಕಟ್ಟು ಜನಾಂಗದ ಮುತ್ತಮ್ಮ ಎಂಬುವರು ಮರವೇರಿ ಬೆತ್ತಲೆ ಹೋರಾಟ ನಡೆಸಿದ್ದರು. ಈ ವೇಳೆ 528 ಕುಟುಂಬಗಳ ದಾಖಲೆಗಳನ್ನು ಪಡೆದು, ಅಷ್ಟೂ ಕುಟುಂಬಗಳಿಗೆ ಕುಶಾಲನಗರ ಸಮೀಪದ ಬ್ಯಾಡಗೊಟ್ಟದಲ್ಲಿ 350 ಮತ್ತು ಬಸವನಹಳ್ಳಿಯಲ್ಲಿ 178 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ 479 ಕುಟುಂಬಗಳು ಮಾತ್ರವೇ ಮನೆಗಳಿಗೆ ಬಂದಿದ್ದು, ಹಕ್ಕುಪತ್ರ ಪಡೆದು, ವಾಸಿಸುತ್ತಿವೆ. ಇನ್ನೂ 49 ಕುಟುಂಬಗಳು ಇಂದಿಗೂ ಹೊಸ ಮನೆಗಳಿಗೆ ಬಂದಿಲ್ಲ ಎನ್ನಲಾಗುತ್ತಿದೆ.

mdk tribal homes 6

ಈ 49 ಕುಟುಂಬಗಳು ಇಂದಿಗೂ ವಿವಿಧ ಎಸ್ಟೇಟ್‍ಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿವೆ. ಮನೆಗಳಿಗೆ ಬರುವಂತೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಮನೆಗಳಿಗೆ ಬಾರದಿದ್ದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ, ಅವರಿಗೆ ಮನೆಗಳನ್ನು ವಿತರಣೆ ಮಾಡುವುದಾಗಿ ಐಟಿಡಿಪಿ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

mdk tribal homes 5

ಬುಡಕಟ್ಟು ಸಮುದಾಯದ ಮುಖಂಡರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಹೋರಾಟ ಮಾಡಿ ಮನೆಗಳನ್ನು ಪಡೆದಿದ್ದೇವೆ. 49 ಕುಟುಂಬಗಳು ತಮ್ಮ ದಾಖಲನೆಗಳನ್ನು ವಿರಾಜಪೇಟೆ ತಾಲೂಕಿನಿಂದ ಸೋಮವಾರಪೇಟೆ ತಾಲೂಕಿಗೆ ಬದಲಾವಣೆ ಮಾಡಿಕೊಂಡಿಲ್ಲ. ಜೊತೆಗೆ ಕಾಫಿ ತೋಟಗಳಲ್ಲಿ ಈಗ ಕೂಲಿ ಸಿಗುವುದರಿಂದ ಲೈನ್ ಮನೆಗಳಲ್ಲಿ ಇದ್ದಾರೆ. ಈಗಾಗಲೇ 49 ಕುಟುಂಬಗಳ ಸಂಬಂಧಿಕರೇ ಅವರ ಈ ಮನೆಗಳಲ್ಲಿ ಇದ್ದಾರೆ. ಹೀಗಾಗಿ ಬೇರೆಯವರಿಗೆ ಮನೆಗಳನ್ನು ವಿತರಣೆ ಮಾಡಲು ಬಿಡುವುದಿಲ್ಲ. ಹಾಗೇನಾದರೂ ಮಾಡಿದರೆ ಮತ್ತೆ ತೀವ್ರ ಹೋರಾಟ ನಡೆಸುತ್ತೇವೆ ಎನ್ನುತ್ತಿದ್ದಾರೆ.

mdk tribals e1612181117833

Share This Article
Leave a Comment

Leave a Reply

Your email address will not be published. Required fields are marked *