ಐಟಿ ಕಂಪನಿ ಉದ್ಯೋಗಿಯ ಕೃಷಿ ಸಾಧನೆ – ಗ್ರಾಮದ ಜನತೆಯಿಂದ ಯುವತಿಗೆ ಶ್ಲಾಘನೆ

Public TV
4 Min Read
it girl web 5

ಚಿತ್ರದುರ್ಗ: ಇಂದಿನ ಯುಗದಲ್ಲಿ ಕೃಷಿ ಅಂದರೆ ಮೂಗು ಮುರಿಯೋರೇ ಹೆಚ್ಚು, ಅದರಲ್ಲೂ ಯುವ ಸಮೂಹ ಉದ್ಯೋಗ ಅರಸಿ ಗ್ರಾಮ ತೊರೆದು ಪಟ್ಟಣ ವಲಸೆ ಹೋಗುತ್ತಾರೆ. ಎಂಜಿನಿಯರ್ ಪದವಿಧರರಾದರೆ ಸಾಕು ರೆಸ್ಯುಮ್ ಹಿಡಿದುಕೊಂಡು ಕಚೇರಿಗಳತ್ತ ಎಸಿ ಕೆಳಗೆ ಕೂರುವ ಕೆಲಸಕ್ಕಾಗಿ ಅಳೆದಾಡುತ್ತಾರೆ. ಆದರೆ ಇವೆಲ್ಲವುಗಳಿಗೆ ವಿರುದ್ಧ ಎನ್ನುವಂತೆ ಇಂಜಿನಿಯರಿಂಗ್ ಓದಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಕೈ ತುಂಬಾ ಸಂಬಳ ಪಡೆಯುತಿದ್ದ ಚಿತ್ರದುರ್ಗ ಜಿಲ್ಲೆಯ ಯುವತಿಯೊಬ್ಬರು, ಬರದ ನಾಡಿನಲ್ಲಿ ಬಂಗಾರ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿ, ತನ್ನ ಸಹೋದರನಿಗೆ ಉದ್ಯೋಗ ಸೃಷ್ಟಿಸಿದ್ದಲ್ಲದೇ ಗ್ರಾಮದ ಹತ್ತಾರು ಜನರಿಗೆ ಕೆಲಸ ನೀಡುವ ಮೂಲಕ ರೈತ ಸಂಕುಲಕ್ಕೆ ಮಾದರಿಯಾಗಿದ್ದಾರೆ.

it girl web 1

ಬರದನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ರೋಜಾ ರೆಡ್ಡಿ ಎಂಬ ಯುವತಿ ಇಂಜಿನಿಯರಿಂಗ್ ಓದಿ, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಎದುರಾದ ಲಾಕ್‍ಡೌನ್ ಸಂಕಷ್ಟದಿಂದ ಮನೆ ಸೇರಿದ ಯುವತಿ ತನ್ನ ತಂದೆ ಹಾಗು ಸಹೋದರನೊಂದಿಗೆ ಸೇರಿಕೊಂಡು ಸಾವಯವ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮೊದಲೇ ನೀರಿನ ಕೊರತೆಯಿಂದ ಬಳಲುತಿದ್ದ ಗ್ರಾಮದಲ್ಲಿ ಮಗಳು ಕೃಷಿ ಮಾಡುತ್ತೀನಿ ಎಂಬ ನಿರ್ಧಾರಕ್ಕೆ ಪೋಷಕರು ನಿರಾಕರಿಸಿದ್ದಾರೆ. ಆಗ ತಂದೆ ತಾಯಿಗಳ ಮನವೊಲಿಸಿ ಕೃಷಿ ಮಾಡಲು ನಿರ್ಧರಿಸಿದ ಯುವತಿ ಲಾಕ್‍ಡೌನ್ ಸಮಯವನ್ನ ಕೃಷಿ ಕಾರ್ಯಗಳಿಗೆ ಬಳಸಿಕೊಂಡು, ವಿವಿಧ ಪ್ರಗತಿಪರ ರೈತರ ಜೊತೆ ಚರ್ಚಿಸಿ,ಸಾವಯವ ಕೃಷಿ ಆರಂಭಿಸಿದ್ದಾರೆ. ಬಳಿಕ ರೋಜಾ ಕೃಷಿ ಚಟುವಟಿಕೆ ನೋಡಿ ಗ್ರಾಮದ ಜನರು ಮೊದಲು ವಿರೋಧಿಸುತ್ತಾ, ಗೇಲಿ ಮಾಡಿದರು. ಆದರೂ ಸಹ, ಛಲ ಬಿಡದ ಯುವತಿ 06 ಎಕರೆ ಪ್ರದೇಶದಲ್ಲಿ 35 ತಳಿಗಳ ತರಕಾರಿ ಬೆಳೆದು ಲಕ್ಷ ಲಕ್ಷ ಆದಾಯ ಸಂಪಾದನೆ ಮಾಡಿದರು. ಇದನ್ನು ನೋಡಿದ ಗ್ರಾಮದ ಜನತೆ ಯುವತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

it girl web 4

ಇಂಜಿನಿಯರಿಂಗ್ ಓದಿ ಜೊತೆಗೆ ಸಾವಯುವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನು ಯುವತಿ ಹೊಂದಿದ್ದಳು. ಇಂಜಿನಿಯರಿಂಗ್ ಓದಿ ಕೃಷಿ ಮಾಡುವುದು ಬೇಡ, ಆದಾಯ ಸಿಗುವುದಿಲ್ಲ ಎಂದು ಯುವತಿ ಪೋಷರು ಉದ್ಯೋಗ ಮಾಡಲು ಬೆಂಗಳೂರಿಗೆ ಕಳಿಹಿಸಿದ್ದರು. ಒಲ್ಲದ ಮನಸಿನಿಂದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಳಿಸಿ, ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿದ್ದ ಆಕೆ ಉದ್ಯೋಗದ ಜೊತೆಗೆ ಬಿಡುವಿನ ಸಮಯದಲ್ಲಿ ಸಾವಯವ ಕೃಷಿ ಪದ್ದತಿ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಲಾಕ್‍ಡೌನ ಅವಧಿಯಲ್ಲಿ ಹೊರ ರಾಜ್ಯದ ಕೃಷಿ ಸಾಧಕರ ಸಹಕಾರ ಪಡೆದುಕೊಂಡಿದ್ದಾರೆ. ತದ ನಂತರದಲ್ಲಿ ಬೆಳಗಾವಿ, ಮಹಾರಾಷ್ಟ್ರ, ಸೇರಿದಂತೆ ಹಲವು ಭಾಗಗಳಿಂದ ತರಕಾರಿ ಸಂಬಂಧಿಸಿದ ಬಿತ್ತನೆ ಬೀಜ ತಂದು, ತಾವೇ ಕೃಷಿಯಲ್ಲಿ ತೊಡಗಿ ಇಂದು ಪ್ರತಿ ದಿನ 10 ರಿಂದ 15 ಸಾವಿರ ಆದಾಯ ಪಡೆಯುತ್ತಿದ್ದಾರೆ. ಕೃಷಿ ಸಹವಾಸ ಬೇಡವೆಂದು ಸುಮ್ಮನಾಗಿದ್ದ ತಂದೆ ಸೇರಿದಂತೆ ಸಹೋದರನಿಗೆ ಬಿಡುವಿಲ್ಲದಷ್ಟು ಕಾಯಕ ನೀಡಿದ್ದಾರೆ. ಗ್ರಾಮದ ಹತ್ತಾರು ಜನರಿಗೆ ಕೂಲಿ ಕೆಲಸವನ್ನು ನೀಡಿದ್ದಾರೆ.

it girl web

ಬರದ ನಾಡಿಲ್ಲಿ ಬಂಗಾರದ ಬೆಳೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎನಿಸಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಪ್ರತಿ ವರ್ಷ ಬರಕ್ಕೆ ತುತ್ತಾಗುತ್ತದೆ. ಅದರಲ್ಲಿಯೂ ಬರದ ಭೂಮಿಯಲ್ಲಿ ಕೃಷಿ ಚಟುವಟಿಕೆ ಸಾಧ್ಯವಾಗದ ಮಾತು ಎಂದು ಹಲವು ಜನ ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಅದನ್ನೆ ಸವಾಲಾಗಿ ಸ್ವೀಕರಿಸಿದ ಯುವತಿ ರೋಜಾ ತಮ್ಮ ಬಳಿ ಇದ್ದ 15 ಎಕರೆ ಭೂಮಿಯಲ್ಲಿ ಕೇವಲ 06 ಎಕರೆ ಜಮೀನನ್ನು ಬಳಸಿಕೊಂಡು ಸಾವಯವ ಕೃಷಿ ಮಾಡಲು, ಒಂದು ಕೊಳವೆ ಬಾವಿ ಕೊರೆಯಿಸಿದ್ದಾರೆ. ಬಳಿಕ ಜಮೀನಿಗೆ ಹನಿ ನೀರಾವರಿ ಅಳವಡಿಕೆ ಮಾಡಿಕೊಂಡು, ಪ್ರಾರಂಭದಲ್ಲಿ ಕೃಷಿಗೆ ಅಗತ್ಯವಾದ ಸಗಣಿ ಹಾಗೂ ಕೊಟ್ಟಿಗೆ ಗೊಬ್ಬರ ಹಾಕುವ ಮೂಲಕ, ಇಂದು 35 ಬಗೆಯ ಮೆಣಸಿನಕಾಯಿ, ಟೊಮ್ಯಾಟೊ, ವಿವಿಧ ತಳಿಯ ಬದನೆಕಾಯಿ, ಹೂ ಕೋಸು, ಸೇರಿದಂತೆ ದೇಶಿ ವಿದೇಶಿ ತಳಿಯ ತರಕಾರಿಗಳನ್ನು ಬೆಳೆದು ತಾವೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.

it girl web 3

ಆನ್‍ಲೈನ್ ಮಾರುಕಟ್ಟೆ ಪ್ರಾರಂಭಿಸಿದ ಯುವತಿ: ತಾವು ಬೆಳೆದ ತರಕಾರಿ ಮಾರಾಟ ಮಾಡಲು ಆನ್‍ಲೈನ್ ಆ್ಯಪ್ ಡೆವಲಪ್ ಮಾಡಿದ್ದಾರೆ. ಬೆಂಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಅಗತ್ಯಕ್ಕೆ ತಕ್ಕಂತೆ ಸಾವಯುವ ತರಕಾರಿ ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿ ಭಾನುವಾರ ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಕ್ಕೆ ಧಾವಿಸುವ ರೈತರಿಗೆ ಸಾವಯುವ ಕೃಷಿ ಜಾಗೃತಿ ಮೂಡಿಸಿ ತರಕಾರಿ ಮಾರಾಟ ಮಾಡಿ ಬರುತ್ತಿದ್ದಾರೆ. ಜೊತೆಗೆ ಇವರು ಬೆಳೆದ ಸಾವಯವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಹಲವು ರೈತರು ಯುವತಿ ಅಳವಡಿಸಿದ ಕೃಷಿ ಪದ್ದತಿ ವೀಕ್ಷಿಸಲು ವಿವಿಧೆಡೆಗಳಿಂದ ಬರುತ್ತಿದ್ದಾರೆ. ಜಮೀನಿಗೆ ಬರುವ ರೈತರಿಗೆ ಕೃಷಿ ಮಹತ್ವ, ವಿಧಾನ ಕುರಿತು ಮಾಹಿತಿ ಹಾಗೂ ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ನೀಡುತ್ತಿದ್ದಾರೆ.

it girl web 2

ಆನ್‍ಲೈನ್ ತರಕಾರಿ ಕಂಪನಿ ಸ್ಥಾಪನೆ ಉದ್ದೇಶ: ರಾಸಾಯನಿಕ ಗೊಬ್ಬರದಿಂದ ಬೆಳೆದ ತರಕಾರಿಗಳು ಆರೋಗ್ಯಕ್ಕೆ ಮಾರಕ ಎಂದು ಅರಿತ ಯುವತಿ ರೋಜಾ ಅವರು, ಜನರಿಗೆ ಸಾವಯವ ಕೃಷಿ ತರಕಾರಿ ನೀಡಲು ಹಾಗೂ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆನ್‍ಲೈನ್ ಆರ್ಗಾನಿಕ್ ಮಾರುಕಟ್ಟೆ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಈಗಾಗಲೇ ಯುವತಿ ರೈತರಿಗೆ ಸಾವಯವ ಕೃಷಿ ಉಪಯೋಗ ಹಾಗೂ ಆದಾಯ ಗಳಿಕೆಯ ಬಗ್ಗೆ ತಿಳುವಕೆ ಮೂಡಿಸುತ್ತಿದ್ದಾರೆ. ಈಕೆಯ ಕೃಷಿ ಸಾಧನೆ ನೋಡಿದ ಪೋಷಕರು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆ ವಿಚಾರವಾಗಿ ಯುವತಿಗೆ ಕುಟುಂಬ ಸಾಥ್ ನೀಡಿದೆ. ಈ ಮೂಲಕ ಮನಸಿದ್ದರೆ ಮಾರ್ಗ ಎಂಬಂತೆ ಈ ಇಂಜಿನಿಯರಿಂಗ್ ಪದವೀಧರೆ ಇತರೆ ಕೃಷಿಕರಿಗೆ ಮಾದರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *