ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾಯಕ ವರ್ಷಾಚರಣೆ ಹೆಸರಿನಲ್ಲಿ ಒಂದು ವರ್ಷದ ಯೋಜನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ರಥಕ್ಕೆ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ, ಆಡಳಿತಗಾರ ಗೌರವ್ ಗುಪ್ತಾ, ಆಯುಕ್ತರಾದ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.
ಕನ್ನಡ ಬಾವುಟ ಕೆಂಪು ಹಾಗೂ ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಕಾರಲ್ಲಿ ಕನ್ನಡದ ಘೋಷಣೆ, ಕನ್ನಡದ ಮಹತ್ವವನ್ನು ಸಾರಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಅನ್ಯ ಭಾಷೆಯ ಜನರಿಗೂ ಕನ್ನಡ ಲಿಪಿ, ಕನ್ನಡ ಸಂಸ್ಕೃತಿಯ ಮಾಹಿತಿಯನ್ನೂ ಅಭಿಯಾನದಲ್ಲಿ ಅರಿವು ಮೂಡಿಸಲಾಗುತ್ತದೆ.
ಬಳಿಕ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆದರೆ ಕನ್ನಡೇತರರೂ ಇಲ್ಲಿದ್ದಾರೆ. ನಗರಕ್ಕೆ ವಿಶಿಷ್ಟ ಪರಂಪರೆ ಇದೆ. ಒಗ್ಗೂಡಿ ಬೆಳೆಯುವಾಗ ಎಲ್ಲರನ್ನು ಭಾಷೆ ಒಗ್ಗೂಡಿಸಬೇಕು. ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಶುದ್ಧ ಕನ್ನಡ ನಾಮಫಲಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದು ಅಂಗಡಿ ಮುಂಗಟ್ಟು, ನಾಮಫಲಕಕ್ಕೆ ಸೀಮಿತ ಅಲ್ಲ ಅಕ್ಷರದಾಸೋಹವೂ ನಡೆಯಬೇಕಿದೆ. ಮುಖ್ಯಮಂತ್ರಿಗಳು ಈ ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಘೋಷಿಸಿದ್ದು, ಅದರ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ ಎಂದರು.
ಆಯುಕ್ತರಾದ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಕೊಡಬೇಕು. ಇದರಲ್ಲಿ ಶೇ. 67ರಷ್ಟು ಕನ್ನಡ ಭಾಷೆ ಇರಬೇಕು. ಉಳಿದ ಭಾಷೆ ಬೇರೆ ಪ್ರಮಾಣದಲ್ಲಿ ಇರಬಹುದು. ಇದಕ್ಕೆ ಸೂಕ್ತ ಕಾನೂನು ಇಲ್ಲದಿದ್ದ ಕಾರಣ, ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಈಗ ಜಾಹಿರಾತು ಬೈಲಾದಲ್ಲೇ ಈ ಅಂಶವನ್ನು ಜಾರಿಗೆ ತರಲಾಗಿದೆ. ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತದೆ. ಅಧ್ಯಕ್ಷರು ಹೇಳಿದ್ದಂತೆ, ಪಾಲಿಕೆ ನಾಮಫಲಕಗಳಲ್ಲೂ ಅಕ್ಷರ ತಪ್ಪಾಗಿರುತ್ತವೆ. ಇದನ್ನು ಪ್ರತೀ ವಲಯದ ಅಧಿಕಾರಿಗಳಿಗೆ ಸರಿಪಡಿಸಲು ತಿಳಿಸಲಾಗಿದೆ ಎಂದರು.