– ಕೆಂಪೇಗೌಡ ಕಟ್ಟಿದ ಆಸ್ತಿ ರಾಜ್ಯದ ಜನರ ಆಸ್ತಿ
ಚಿಕ್ಕಮಗಳೂರು: ಬೆಂಗಳೂರು ನಗರಕ್ಕೆ ನಮ್ಮ ರೈತರನ್ನ ಬಿಟ್ಟಿಲ್ಲ. ರೈತರ ಕೋಪ-ತಾಪ-ಶಾಪ ಎಲ್ಲಾ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಸರ್ಕಾರಕ್ಕೆ ಅಂತ್ಯದ ದಿನ ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಗಳ ಮದುವೆಗೆ ಆಹ್ವಾನ ನೀಡಲು ಜಿಲ್ಲೆಗೆ ಬಂದಿದ್ದ ಡಿಕೆಶಿ, ಶೃಂಗೇರಿ ಶಾರದಾಂಬೆ ಹಾಗೂ ಗುರುಗಳು, ರಂಭಾಪುರಿ ಪೀಠದ ಗುರುಗಳು ಹಾಗೂ ಗೌರಿಗದ್ದೆ ಆಶ್ರಮದ ಗುರುಗಳ ಆಶೀರ್ವಾದ ಪಡೆದರು. ಇದೇ ವೇಳೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿ ಆಶೀರ್ವಾದ ಪಡೆದು ಮಾತನಾಡಿದ ಅವರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಖಂಡನೀಯ. ಅವರು ರ್ಯಾಲಿ ಮಾಡಿಕೊಂಡು ಪ್ರತಿಭಟನೆ ಮಾಡ್ತಿದ್ರು. ಅವರ್ಯಾರು ಕಾನೂನು ಭಂಗ ಮಾಡಿರಲಿಲ್ಲ. ರೈತ ವಿರೋಧಿ ಸರ್ಕಾರ ಅನ್ನೋದಕ್ಕೆ ನಮ್ಮ ಸಂವಿಧಾನದ ಪ್ರಥಮ ದಿನ ಗಣರಾಜ್ಯೋತ್ಸವದಂದು ಇದಕ್ಕೆ ಸಾಕ್ಷಿ ನುಡಿಯನ್ನ ಮಾಡಿದ್ದಾರೆ ಎಂದರು.
ರಾಜ್ಯದಲ್ಲೂ ಕೂಡ ಇದೆ ಆಗಿದೆ. ದೆಹಲಿಯಲ್ಲೇ ಬಿಟ್ಟಿರುವಾಗ ಇವರಿಗೇನು ಬಂತು. ಯಾಕೆ ಒಳಗೆ ಬರಬಾರದು. ಅವರೆಲ್ಲಾ ಇಲ್ಲ ಅಂದ್ರೆ ಬೆಂಗಳೂರಲ್ಲಿ ಇವರು ಊಟ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ಇವರೆಲ್ಲಾ ರೈತರ ಮಕ್ಕಳಲ್ವಾ. ನಾನು ರೈತರ ಮಗ ಹಸಿರು ಶಾಲು ಹಾಕಿಕೊಂಡು ಸರ್ಕಾರ ಮಾಡುತ್ತೇನೆ ಎಂದು ಹೇಳಿ ರೈತ್ರು ಬೆಂಗಳೂರು ಬರಲು ಯಾಕೆ ಬಿಡಲ್ಲ. ಬರೀ ಮರ್ಸಿಡೀನ್ ಬೆಂಜ್, ದೊಡ್ಡ ಕಾರು, ಸಾಹುಕಾರರ ಕಾರೇ ಓಡಾಡಬೇಕಾ. ಬೆಂಗಳೂರಲ್ಲಿ ರೈತರ ಟ್ರ್ಯಾಕ್ಟರ್ ಓಡಾಡಲಿ. ರೈತರು ಬೆಂಗಳೂರಲ್ಲಿ ಪ್ರತಿಭಟನೆ ಮಾಡಲಿ. ಏನು ತಪ್ಪಿದೆ. ರೈತರ ಮಕ್ಕಳು ಬೆಂಗಳೂರು ಆಸ್ತಿ. ಕೆಂಪೇಗೌಡ ಕಟ್ಟಿದೆ ಬೆಂಗಳೂರು ರಾಜ್ಯದ ಜನತೆ ಆಸ್ತಿ. ಬೆಂಗಳೂರು ಬರೀ ಸರ್ಕಾರ ನಡೆಸೋರ ಆಸ್ತಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸಿ.ಟಿ ರವಿಗೆ ಏನೋ ಸಮಸ್ಯೆ ಇದ್ದಂತೆ ಕಾಣುತ್ತೆ. ಓಲೈಕೆ ಮಾಡಿಕೊಳ್ಳಬೇಕು ಏನೋ ಭಾಷಣ ಮಾಡುತ್ತಿದ್ದಾರೆ ಅಷ್ಟೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿ ದಿನ ಈ ಸರ್ಕಾರದ ವೈಫಲ್ಯವನ್ನ ಜನತೆ ಮುಂದಿಡುವ ಕೆಲಸವನ್ನ ವಿರೋಧ ಪಕ್ಷಗಳು, ಸಂಘಟನೆಗಳು ಮಾಡುತ್ತವೆ ಅದರಲ್ಲಿ ತಪ್ಪೇನಿದೆ. ಇವರು ಮಾಡಿಲ್ವ. ಇವರು ಮಾಡಿದಂತೆ ಎಲ್ಲರೂ ಮಾಡೋದು ಎಂದರು.