ದೀದಿ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ

Public TV
1 Min Read
mmata banerjee pm modi

ಕೋಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‍ಚಂದ್ರ ಭೋಸ್ ಅವರ ಜಯಂತಿಯನ್ನು ಇಂದು ಹಲವೆಡೆ ‘ಪರಾಕ್ರಮ ದಿನ’ವನ್ನಾಗಿ ಸಂಭ್ರಮದಿಂದ ಆಚರಿಸಲಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರೂಪವೆಂಬಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವೇದಿಕೆ ಹಂಚಿಕೊಂಡಿದ್ದಾರೆ.

ಈ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಲು ಆಗಮಿಸುತ್ತಿದ್ದಂತೆ ನೆರೆದಿದ್ದ ಜನ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇದರಿಂದಾಗಿ ದೀದಿ ಬೇಸರಗೊಂಡು ಭಾಷಣ ಮಾಡದೆ ತೆರಳಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವೆಂದರೆ ಘನತೆ ಇರಬೇಕು. ಇದು ರಾಜಕೀಯ ಸಮಾವೇಶವಲ್ಲ, ಸರ್ಕಾರಿ, ಸಾರ್ವಜನಿಕ ಕಾರ್ಯಕ್ರಮವಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಈ ರೀತಿ ಅವಮಾನಿಸುವುದು ಸರಿಯಲ್ಲ. ಕೋಲ್ಕತ್ತಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಪ್ರಧಾನಿ ಮಂತ್ರಿಗೆ ನಾನು ಆಭಾರಿಯಾಗಿದ್ದೇನೆ. ಈ ವೇಳೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿ ತೆರಳಿದ್ದಾರೆ.

ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್‍ನಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷ್‍ಚಂದ್ರ ಭೋಸ್ ಅವರ 125ನೇ ಜಯಂತಿಯನ್ನು ‘ಪರಾಕ್ರಮ ದಿನ’ವನ್ನಾಗಿ ಆಚರಿಸಲಾಯಿತು. ಅಪರೂಪವೆಂಬಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೋಲ್ಕತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೇದಿಕೆ ಹಂಚಿಕೊಂಡಿದ್ದರು.

ಎಲ್‍ಎಸಿಯಿಂದ ಎಲ್‍ಒಸಿವರೆಗೆ ಭಾರತ ಪವರ್‍ಫುಲ್: ಪರಾಕ್ರಮ ದಿನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಹಿಂದೆ ನೇತಾಜಿ ಸುಭಾಷ್‍ಚಂದ್ರ ಭೋಸ್ ಅವರು ಕಲ್ಪಿಸಿಕೊಂಡಂತೆ ಎಲ್‍ಎಸಿಯಿಂದ ಎಲ್‍ಒಸಿ ವರೆಗೆ ಭಾರತದ ಬಲಶಾಲಿ ಅವತಾರಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಎಲ್‍ಒಸಿ ಹಾಗೂ ಎಲ್‍ಎಸಿಯಲ್ಲಿ ನಿರ್ಮಾಣವಾಗಿರುವ ಸವಾಲುಗಳಿಗೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಶ್ಲಾಘಿಸಿದ್ದಾರೆ.

ನೇತಾಜಿ ನಮ್ಮನ್ನು ನೋಡುತ್ತಿದ್ದಾರೆ, ಹರಸುತ್ತಿದ್ದಾರೆ, ನೇತಾಜಿ ಕಲ್ಪಿಸಿಕೊಂಡಂತೆ ಭಾರತ ಬಲಶಾಲಿ ಅವತಾರಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ನೇತಾಜಿಯವರು ಅಖಂಡ ಭಾರತದ ಪರಿಕಲ್ಪನೆ ಹೊಂದಿದ್ದರು. ಅಲ್ಲದೆ ಆಝಾದ್ ಹಿಂದ ಸರ್ಕಾರದ ಮೊದಲ ಮುಖ್ಯಸ್ಥರಾಗಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *