ಶಿವಮೊಗ್ಗ: ಜಿಲ್ಲೆಯ ಹಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಧಾಕರ್ ನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಗಣಿಗಾರಿಕೆಗೆ ಭೂಮಿ ಕೊಟ್ಟಿರುವ ಅನಿಲ್ ಕುಲಕರ್ಣಿ ಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ರವೀಂದ್ರ ನಗರದ ನಿವಾಸಿ ಸುಧಾಕರ್ ಒಡೆತನದ ಕಲ್ಲನಾಗೂರಿನಲ್ಲಿರುವ ಬಿವಿಎಸ್ ಸ್ಟೋನ್ ಕ್ರಷರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೂರು ವರ್ಷದ ಮಟ್ಟಿಗೆ ಜಿಲ್ಲಾಡಳಿತ ಪರವಾನಗಿ ನೀಡಿತ್ತು. ಈ ವೇಳೆ ಸುರಕ್ಷಿತ ವಲಯದ ಸುತ್ತ 100 ಮೀಟರ್ ಅಂತರದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳಲ್ಲ ಎಂಬ ಷರತ್ತಿಗೆ ಒಪ್ಪಿಗೆ ಸೂಚಿಸಿ ಸುಧಾಕರ್ ಸಹಿ ಕೂಡ ಹಾಕಿದ್ದ.
ಆ ಬಳಿಕ ಸ್ಫೋಟಕಗಳ ಬಗ್ಗೆ ಸ್ಥಳೀಯರು ಹತ್ತಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಇದೀಗ ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ರಾತ್ರಿ 10.30ರ ವೇಳೆ ಭಾರೀ ಶಬ್ದ ಕೇಳಿದ ಜನ ಭಯಭೀತರಾಗಿದ್ದರು. ಬಳಿಕ ಅದು ಜಲ್ಲಿ ಕ್ರಷರ್‍ನಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿರುವುದಾಗಿ ಬಯಲಾಗಿದೆ. ಈ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದು, ಸದ್ಯ 7 ಮೃತದೇಹಗಳು ಪತ್ತೆಯಾಗಿವೆ. ಜಿಲೆಟಿನ್ ತುಂಬಿದ ಲಾರಿ ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿ ಪೀಸ್ ಪೀಸ್ ಆಗಿದೆ. ಕಿಲೋಮೀಟರ್ ದೂರದವರೆಗೂ ಲಾರಿಯ ಬಿಡಿಭಾಗಗಳು ಹಾರಿವೆ.
ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದ್ದು, ಒಂದೊಂದು ಅಂಗಾಂಗ ಒಂದೊಂದು ಕಡೆ ಸಿಕ್ಕಿದೆ. ಕ್ರಷರ್ ಸುತ್ತಮುತ್ತ ಇದ್ದ ಬಹುತೇಕ ಮರಗಳು ನಾಶವಾಗಿವೆ. 40 ಕಿಲೋಮೀಟರ್ ದೂರದವರೆಗೂ ಶಬ್ದ ಕೇಳಿದೆ. ಸ್ಫೋಟದ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಘಟನೆಯಿಂದ ಭಾರೀ ಹಾನಿ ಸಂಭವಿಸಿದೆ.