ವಲಸಿಗರ ಅಸಮಾಧಾನ ಸ್ಫೋಟ – ಅಂತರ ಕಾಯ್ದುಕೊಂಡ ಮಾಧುಸ್ವಾಮಿ

Public TV
2 Min Read
cabinet fight yediyurappa

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ವಲಸಿಗ ಶಾಸಕರ ಅಸಮಾಧಾನ ಬಹಿರಂಗವಾಗಿದೆ. ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಧಾನ ಸಕ್ಸಸ್ ಆಗಿದೆ ಎಂದು ಪರಿಭಾವಿಸಿದರೂ ಸಂಪುಟ ಸಭೆಯಲ್ಲಿ ಗೋಚರವಾಗಿದೆ.

ಸಚಿವ ಅಶೋಕ್, ಬೊಮ್ಮಾಯಿ ನೇತೃತ್ವದಲ್ಲಿ ಅಸಮಾಧಾನ ಬಗೆಹರಿದಿದೆ, ಸಂಜೆ 4:30ರ ಸಂಪುಟ ಸಭೆಗೆ ಎಲ್ಲ ಸಚಿವರು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಚಿವ ಮಾಧುಸ್ವಾಮಿ, ಸುಧಾಕರ್, ಎಂಟಿಬಿ ನಾಗರಾಜ್ ಹಾಗೂ ಗೋಪಾಲಯ್ಯ ಗೈರು ಹಾಜರಾಗಿದ್ದು ಅಚ್ಚರಿ ಕಾರಣವಾಯ್ತು.

sudhakar MTB

ವಿಧಾನಸೌಧದ ಮೊಗಸಾಲೆಯಲ್ಲೇ ಎಂಟಿಬಿ ಹಾಗೂ ಗೋಪಾಲಯ್ಯಗೆ ಕರೆ ಮಾಡಿದ ಅಶೋಕ್, “ನೀವು ಬರ್ತಿನಿ ಅಂತ ಒಪ್ಪಿಕೊಂಡಿದ್ದೀರಿ. ಈಗ ಬರಬೇಕು ತಾನೆ” ಹೇಳಿ ಎಂದು ಗರಂ ಆದ್ರು. ಅಶೋಕ್ ಮಾತಿಗೆ ಅತೃಪ್ತ ಸಚಿವರು ಕರಗಲೇ ಇಲ್ಲ. ಸಚಿವ ಸುಧಾಕರ್ ಅಂತೂ ದಿನಪೂರ ಮನೆಯಿಂದ ಹೊರಗಡೆ ಬರಲೇ ಇಲ್ಲ.

ಇದಕ್ಕೂ ಮುನ್ನ, ಮುಖ್ಯಮಂತ್ರಿಗಳ ಎದುರು ಮಾತನಾಡಿದ ಎಂಟಿಬಿ ನಾಗರಾಜ್, ಎಲ್ಲರಿಗೂ ಎಣ್ಣೆ ಕುಡಿಸೋ ಪಾಪದ ಖಾತೆ ನಂಗೆ ಬೇಡ. ವಸತಿ ಖಾತೆ ಸಿಕ್ಕಿದ್ದಿದ್ರೆ ಬಡವರಿಗೆ ಸೈಟ್ ಕೊಡೋದೋ, ಸ್ಲಂ ಅಭಿವೃದ್ಧಿ ಮಾಡೋದು ಮಾಡ್ಬೋದಿತ್ತು. ಹೊಸ ಖಾತೆ ನೀಡುವವರೆಗೆ ವಿಧಾನಸೌಧಕ್ಕೆ ಕಾಲಿಡಲ್ಲ. ಸರ್ಕಾರಿ ಕಾರು ಬಳಸಲ್ಲ ಅಂತ ಶಪಥ ಮಾಡಿದ್ದಾರೆ ಎನ್ನಲಾಗಿದೆ. ಇನ್ನಿಬ್ಬರು ವಲಸಿಗ ಶಾಸಕರಾದ ಗೋಪಾಲಯ್ಯ ಹಾಗೂ ನಾರಾಯಣಗೌಡ, ನಾವೇನು ತಪ್ಪು ಮಾಡಿದ್ದೇವೆ. ನಮ್ಮ ಖಾತೆ ಬದಲಾವಣೆಗೆ ಕಾರಣ ಏನು ಅಂತ ಬೇಸರ ವ್ಯಕ್ತಪಡಿಸಿದರು.

ಸಿಎಂನಿಂದ ಅಂತರ: ಈ ಬಾರಿ ಖಾತೆ ಹಂಚಿಕೆಯಲ್ಲಿ ಸಚಿವ ಮಾಧುಸ್ವಾಮಿ ಅವರ ಹಿಂದಿನ ಖಾತೆಗಳೇ ಹರಿದು ಹಂಚಿಕೆಯಾಗಿವೆ. ಈ ಬಗ್ಗೆ ಮಾಧುಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ. ತಮ್ಮ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಬೊಮ್ಮಾಯಿಗೆ, ಸಣ್ಣ ನೀರಾವರಿ ಖಾತೆಯನ್ನು ಯೋಗೇಶ್ವರ್ ಅವರಿಗೆ ನೀಡಲಾಗಿದೆ. ಇದರಿಂದ ಮಾಧುಸ್ವಾಮಿ ಕುಪಿತಗೊಂಡಿದ್ದು, ವೈದ್ಯಕೀಯ ಶಿಕ್ಷಣಕ್ಕೂ ನನಗೂ ಏನ್ ಸಂಬಂಧ? ವಿಧಾನಮಂಡಲದಲ್ಲಿ ಸರ್ಕಾರವನ್ನು ಸಮರ್ಥವಾಗಿಯೇ ಸಮರ್ಥಿಸಿಕೊಂಡರೂ ನನ್ನ ಖಾತೆಗಳ ಬದಲಾವಣೆ ಏಕೆ ಅಂತ 3 ದಿನಗಳ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದ ವಿಚಾರ ಈಗ ಪ್ರಕಟವಾಗಿದೆ.

ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಮಾಡದಂತೆ ಮನವಿ ಮಾಡಿಕೊಂಡರೂ ಖಾತೆ ಬದಲಿಸಿರೋದು ಸಿಟ್ಟಿಗೆ ಕಾರಣವಾಗಿದೆ. ಮುಖ್ಯಮಂತ್ರಿಗಳಿಂದ ಅಂತರ ಕಾಯ್ದುಕೊಂಡಿರುವ ಮಾಧುಸ್ವಾಮಿ, ಇಂದು ತುಮಕೂರಿನಲ್ಲಿ ನಡೆದ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಮುಖ್ಯಮಂತ್ರಿಗಳು ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಂತೆ, ಮಾಧುಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದರು. ಈ ಬಗ್ಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿ,”ನಂಗ್ಯಾವ ಅಸಮಾಧಾನವೂ ಇಲ್ಲ. ಖಾತೆ ಹಂಚಿಕೆ ಮಾಡೋದು ಸಿಎಂ ಪರಮಾಧಿಕಾರ. ನಮಗೆ ಕ್ಯಾಪ್ಟನ್, ಅಂಪೈರ್ ಎಲ್ಲವೂ ಚೀಫ್ ಮಿನಿಸ್ಟರ್ರೇ. ಅವರು ಯಾವುದು ಮಾಡು ಅಂತಾರೊ ಅದನ್ನ ಮಾಡ್ತೇನೆ, ನಿಭಾಯಿಸ್ತೇನೆ. ರಾಜೀನಾಮೆ ಕೊಟ್ರೆ ಮೊದಲು ಮಾಧ್ಯಮಗಳಿಗೇ ಹೇಳ್ತೇನೆ” ಎಂದು ಬೇಸರದಲ್ಲೇ ಮಾಧುಸ್ವಾಮಿ ಮಾತನಾಡಿದ್ದಾರೆ. ಮಾಧುಸ್ವಾಮಿಗೂ ಮುನ್ನ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿಯನ್ನು ಕರೆದು ಮಾತನಾಡಿಸ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *