ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದದರ್ಜೆಗೆ, ದಿನದ 24 ಗಂಟೆ ಸೇವೆ: ಸುಧಾಕರ್

Public TV
3 Min Read
hbl sudhakar

ಹುಬ್ಬಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಅಲ್ಲದೆ 24/7 ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕಿಮ್ಸ್, ಡಿಮ್ಹಾನ್ಸ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಕೇಂದ್ರಕ್ಕೆ ಒಬ್ಬ ಆಯುಷ್ ವೈದ್ಯಾಧಿಕಾರಿ ಸೇರಿದಂತೆ ಮೂವರು ವೈದ್ಯಾಧಿಕಾರಿಗಳನ್ನು ನೇಮಿಸಲಾಗುವುದು. ರಾಜ್ಯದಲ್ಲಿ ಮೂರು ಸ್ತರದ ಆರೋಗ್ಯ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ಕರ್ತವ್ಯ ನಿರ್ವಹಿಸಲಿವೆ ಎಂದರು.

hbl sudhakar 4

ಹೊಸದಾಗಿ 2,500 ವೈದ್ಯರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಗ್ರೂಪ್ ಡಿ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆಯಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುವುದು. ಉತ್ಕೃಷ್ಟ ಆರೋಗ್ಯ ಸೇವೆಯ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ. ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಆಯುಷ್‍ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ವಿಮಾ ಯೋಜನೆಯಡಿ ಹೆಚ್ಚಿನ ಗುರಿಯನ್ನು ಆರೋಗ್ಯ ಕೇಂದ್ರಗಳಿಗೆ ನಿಗದಿ ಮಾಡಲಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂದರು.

hbl sudhakar 2 e1611065241835

ಕಿಮ್ಸ್ ನಲ್ಲಿ ಅಂಗಾಂಗ ಕೇಂದ್ರ
ಉತ್ತರ ಕರ್ನಾಟಕ ಸಂಜೀವಿನಿ ಎನಿಸಿರುವ ಕಿಮ್ಸ್ ನಲ್ಲಿ ಅಂಗಾಂಗ ದಾನ ಮಾಡುವವರಿಂದ ಉಪಯುಕ್ತ ಅಂಗಗಳನ್ನು ಪಡೆದು, ಇತರರಿಗೆ ಅಳವಡಿಸಲು ಅನುಕೂಲವಾಗುವಂತೆ ಅಂಗಾಂಗ ಕೇಂದ್ರ ಸ್ಥಾಪನೆ ಮಾಡಲಾಗುವದು. ಮರಣದ ನಂತರ ಅಂಗಗಳನ್ನು ದಾನ ಮಾಡುವಂತೆ ಜನರನ್ನು ಓಲೈಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಿಮ್ಸ್ ನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾಲೂಕು ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವದು. ಜಿಲ್ಲೆಯಲ್ಲಿ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಉಳಿದ ಜಿಲ್ಲೆಗಳಿಗಿಂತ ಜಾಸ್ತಿಯಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಹಾಗೂ ಕಬ್ಬಿಣ ಅಂಶದ ಮಾತ್ರೆಗಳನ್ನು ಸರಿಯಾಗಿ ವಿತರಣೆ ಮಾಡಲು ನಿರ್ದೇಶನ ನೀಡಲಾಗಿದೆ. ಆಹಾರ ಸಂರಕ್ಷಣೆ ಅಧಿಕಾರಿ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಶುಚಿತ್ವ, ಔಷಧ ವಿತರಣೆ ಬಗ್ಗೆ ನಿಯಂತ್ರಣ ವಹಿಸುವಂತೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ತಿಳಿಸಲಾಗುವುದು ಎಂದರು.

hbl sudhakar 1

ಕೋವಿಡ್ ಲಸಿಕೆ ಸುರಕ್ಷಿತ
ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ದೇಶದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಲಸಿಕೆ ಪಡೆಯುವುದರಿಂದ ಕೊವೀಡ್ ರೋಗದ ವಿರುದ್ಧ ಹೋರಾಡಲು ರೋಗ ನಿರೋಧಕ ಶ್ತಕಿ ಹೆಚ್ಚಾಗುತ್ತದೆ. ಕೋವಿಶೀಲ್ಡ್ ಲಸಿಕೆಯ ಮೂರು ಹಂತದ ಪರಿಶೀಲನೆ ಜರುಗಿದೆ. ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುತ್ತಿಲ್ಲ ಎಂದರು.

ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಹೊಸ ಲಸಿಕೆ ಪಡೆಯುವಲ್ಲಿ ಸಹಜವಾಗಿ ಅಳುಕಿನ ಮನೋಭಾವ ಇರುತ್ತೆ. ಲಸಿಕೆ ಪಡೆದವರು ಆರೋಗ್ಯವಾಗಿ, ಕ್ಷೇಮವಾಗಿ ಇರುವುದನ್ನು ನೋಡಿದಾಗ ಇತರರಿಗೂ ಲಸಿಕೆ ಬಗ್ಗೆ ಇರುವ ಭಯ ಹೋಗುತ್ತದೆ. ರಾಜ್ಯದಲ್ಲಿ ಖ್ಯಾತ ವೈದ್ಯರಾದ ಡಾ.ದೇವಿಶೆಟ್ಟಿ, ಡಾ.ಭುಜಂಗ ಶೆಟ್ಟಿ, ಡಾ.ಬಲ್ಲಾಳ್, ಡಾ.ಸುದರ್ಶನ್ ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಉನ್ನತ ಮಟ್ಟದ ವೈದ್ಯರು ಲಸಿಕೆ ಮೇಲೆ ಭರವಸೆ ಇಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ. ಹೃದಯಾಘಾತಕ್ಕೂ ಲಸಿಕೆಗೂ ಸಂಬಂಧವಿಲ್ಲ. ಬಳ್ಳಾರಿಯಲ್ಲಿ ಲಸಿಕೆ ಪಡೆದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

corona vaccine students 1

ಸಭೆಯಲ್ಲಿ ಶಾಸಕ ವಿ.ಎಸ್.ಸಂಕನೂರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಪಾಟೀಲ್ ಓಂ ಪ್ರಕಾಶ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಯಶವಂತ ಮದೀನಕರ್, ಡಿಮಾನ್ಸ್ ನಿರ್ದೇಶಕ ಡಾ.ಮಹೇಶ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

hbl sudhakar 5

ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಚಿವ ಡಾ.ಸುಧಾಕರ್ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಆರೋಗ್ಯ ಕೇಂದ್ರ ಚಿಕಿತ್ಸಾ ಕೊಠಡಿ, ಔಷಧಾಲಯ, ಪ್ರಯೋಗಾಲಯ, ಪ್ರಸೂತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸಚಿವರಿಗೆ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *