ಚಾಮರಾಜನಗರ: ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೆ ನಿನ್ನೆ ಚಾಮರಾಜನಗರ ಗಡಿಭಾಗದಲ್ಲಿ ತಮಿಳು ನಾಮಫಲಕವನ್ನು ಕೆಡವಿ ಹಾಕುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.
ತಮಿಳುನಾಡಿನ ಕೊಂಗಳ್ಳಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಚಾಮರಾಜನಗರ ತಾಲೋಕು ಅರಕಲವಾಡಿ ಸಮೀಪ ಎತ್ತಗಟ್ಟಿ ಬೆಟ್ಟದ ರಸ್ತೆಯಲ್ಲಿ ಹಾಕಿದ್ದ ತಮಿಳು ನಾಮಫಲಕವನ್ನು ಭಾನುವಾರ ವಾಟಾಳ್ ನಾಗರಾಜ್ ಕಿತ್ತು ಹಾಕಿದ್ದಾರೆ. ಕರ್ನಾಟಕ ತಮಿಳುನಾಡು ಗಡಿ ಸಂಧಿಸುವ ಜಾಗದಲ್ಲಿ ಘಟನೆ ನಡೆದಿದ್ದು, ತಮಿಳುನಾಡಿಗೆ ಸೇರಿದ ಜಾಗದಲ್ಲಿ ನಾಮಫಲಕ ಕೆಡವಿರುವುದಾಗಿ ಅಲ್ಲಿನ ಸ್ಥಳೀಯರು ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರ ವಿರುದ್ಧ ತಾಳವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ವಿಚಾರವಾಗಿ ಐಪಿಸಿ ಸೆಕ್ಷನ್ 143(ಕಾನೂನುಬಾಹಿರ), 147 (ಗಲಭೆಗೆ ಪ್ರಚೋದನೆ), 270/3(1) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
5 ದಿನಗಳ ಹಿಂದೆಯಷ್ಟೇ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಚಾಮರಾಜನಗರದ ನಡುರಸ್ತೆಯಲ್ಲಿ ವಾಟಾಳ್ ನಾಗರಾಜ್ ಮಲಗಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ಸ್ಥಳದಲ್ಲಿ ಹಾಕಿದ್ದ ತಮಿಳು ನಾಮಫಲಕಗಳನ್ನು ಕಿತ್ತು ಹಾಕಿದ್ದರು. ಈ ವಿಚಾರವಾಗಿ ತನಗೆ ಕೆನಡಾ, ಅಮೆರಿಕ, ಮಲೇಶಿಯ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂದು ಆರೋಪಿಸಿದ್ದರು.
ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ, ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ. ಅವರೆಲ್ಲರ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದರು.