ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಇರುವ 500ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಬಿಬಿಎಂಪಿಗೆ ತಪ್ಪು ಮಾಹಿತಿಯನ್ನು ಕೊಟ್ಟು ನಾಪತ್ತೆಯಾಗಿದ್ದಾರೆ. ಇದನ್ನು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದ್ದು ಇದು ಬೆಂಗಳೂರಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಬೆಂಗಳೂರಿನ 8 ವಲಯದಲ್ಲೂ ಸೋಂಕಿತರು ನಾಪತ್ತೆಯಾಗಿದ್ದಾರೆ. 8 ವಲಯದಲ್ಲಿ 500ಕ್ಕೂ ಹೆಚ್ಚು ಸೋಂಕಿತರಿದ್ದರು. ಕೊರೊನಾ ದೃಢಪಟ್ಟಾಗ ತಪ್ಪು ಅಡ್ರಸ್ ಕೊಟ್ಟು 1 ವಾರದಿಂದ 500ಕ್ಕೂ ಹೆಚ್ಚು ಸೋಂಕಿತರು ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ನಗರದಲ್ಲಿ ಬರೋಬ್ಬರಿ 506 ಕೊರೊನಾ ಸೋಂಕಿತರಿದ್ದಾರೆ ಎನ್ನಲಾಗಿದ್ದು, ಕೋವಿಡ್ ಟೆಸ್ಟ್ ವೇಳೆ ಮೊಬೈಲ್ ನಂಬರ್ ಮತ್ತು ವಿಳಾಸ ತಪ್ಪಾಗಿ ನೀಡಿದ್ದಾರೆ. ನಂತರ ಪಾಸಿಟಿವ್ ಆದವರ ಟ್ರೇಸ್‍ಗೆ ಹೋದಾಗ ಸುಳ್ಳು ಮಾಹಿತಿ ಕೊಟ್ಟಿರುವುದು ಬಹಿರಂಗವಾಗಿದೆ. ಸೋಂಕಿತರನ್ನು ಟೆಸ್ಟ್ ಮಾಡುವ ಸಂದರ್ಭ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕಿದ್ದ ಬಿಬಿಎಂಪಿ ಇಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾಗಿದೆ. ಇನ್ನೂ ನಗರದಲ್ಲೇ ಇದ್ದಾರ ಅಥವಾ ಬೇರೆ ಹಳ್ಳಿಗಳಿಗೆ ಹೋಗಿದ್ದಾರಾ ಎಂಬುದು ಯಕ್ಷಪ್ರಶ್ನೆಯಾಗಿದೆ.
ಬೆಂಗಳೂರಿನ 8 ವಲಯದ 506 ಜನ ನಾಪತ್ತೆ ಆಗಿದ್ದಾರೆ. ಬೆಂಗಳೂರು ಪೂರ್ವ- 190, ಮಹದೇವಪುರ – 150, ಬೊಮ್ಮನಹಳ್ಳಿ – 88, ಬೆಂಗಳೂರು ಪಶ್ಚಿಮ – 58, ಯಲಹಂಕ – 52, ಆರ್.ಆರ್.ನಗರ – 28, ಬೆಂಗಳೂರು ದಕ್ಷಿಣ-18, ದಾಸರಹಳ್ಳಿ – 7 ಮಂದಿ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ.