ಕೋಲ್ಕತಾ: ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಗಂಗೂಲಿ ಅನಾರೋಗ್ಯದ ಸಮಸ್ಯೆಯಿಂದಾಗಿ ಕೋಲ್ಕತ್ತಾದ ವುಡ್‍ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯಂತೆ ಆಂಜಿಯೋಪ್ಲ್ಯಾಸ್ಟಿ ಟೆಸ್ಟ್ ಮಾಡಿ ಆರೋಗ್ಯ ಸ್ಥಿತಿಯನ್ನು ಗಮನಿಸಲಾಗುತ್ತಿದೆ.
48 ವರ್ಷದ ಗಂಗೂಲಿ ಅವರ ಹೃದಯದ ರಕ್ತನಾಳದಲ್ಲಿರುವ ಬ್ಲಾಕ್‍ಗಳನ್ನು ಶನಿವಾರ ತೆರವುಗೊಳಿಸಲಾಗಿದೆ. ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಸಂದರ್ಭ ಕರೆ ಮಾಡಿದ ಮೋದಿ, ಗಂಗೂಲಿ ಪತ್ನಿ ಜೊತೆ ಮಾತಾನಾಡಿ ನಂತರ ಗಂಗೂಲಿ ಜೊತೆ ಮಾತಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಶೀಘ್ರವೇ ಗುಣಮುಖರಾಗುವಂತೆ ಸೂಚಿಸಿದ್ದಾರೆ.
ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ದಾದ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೋವಿಡ್ ಮಧ್ಯದಲ್ಲೇ ಗಂಗೂಲಿ ಕ್ರಿಕೆಟ್ ಪುನರಾರಂಭದ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ನಡೆದ ಬಿಸಿಸಿಐನ 89ನೇ ವಾರ್ಷಿಕ ಸಾಮಾನ್ಯ ಸಭೆಯ ನೇತೃತ್ವ ವಹಿಸಿದ್ದರು. ಅಲ್ಲದೆ 2022ರ ಐಪಿಎಲ್ ಸೀಸನ್ ಗೆ 2 ಹೆಚ್ಚುವರಿ ಪ್ರಾಂಚೈಸಿಗಳನ್ನು ಸಹ ಘೋಷಣೆ ಮಾಡಿದ್ದಾರೆ.