ತಾಕತ್ತಿದ್ರೆ ಸಂಪೂರ್ಣ ಗೋಮಾಂಸ ರಫ್ತು ನಿಷೇಧಿಸಿ: ಸಿದ್ದರಾಮಯ್ಯ ಚಾಲೆಂಜ್

Public TV
2 Min Read
SIDDARAMAIAH

– ಗೋ ಹತ್ಯೆ ನಿಷೇಧ ಮಸೂದೆ ಹಿಂದೆ 2 ದುರುದ್ದೇಶ
– ಬಿಜೆಪಿ ಆಡಳಿತ ಇರುವ ಗೋವಾದಲ್ಲಿ ಏಕಿಲ್ಲ ಮಸೂದೆ?

ಬೆಂಗಳೂರು: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತಂದಿರೋದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ತಾಕತ್ತಿದ್ರೆ ಗೋಮಾಂಸ ರಫ್ತುಮಾಡುವುದನ್ನು ಸಂಪೂರ್ಣ ನಿಷೇಧಿಸಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ಗೋ ಹತ್ಯೆ ನಿಷೇಧ ಮಸೂದೆ ಬಗ್ಗೆ ಸಾಲು ಸಾಲು ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Karnataka cow slaughter

ಮಸೂದೆ ಹಿಂದೆ ಎರಡು ದುರುದ್ದೇಶ: ವಿಧಾನಮಂಡಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ. ಚರ್ಚೆ ಮಾಡಿದರೆ ಈ ಮಸೂದೆಯ ಹಿಂದಿನ ದುರುದ್ದೇಶಗಳು ಅನಾವರಣಗೊಂಡು ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಬಿಜೆಪಿ ನಾಯಕರಿಗೆ. ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಬೇಕು ಮತ್ತು ಗೋರಕ್ಷಣೆಯ ಹೆಸರಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ಕೊಡಬೇಕು ಎಂಬ ಎರಡು ದುರುದ್ದೇಶಗಳನ್ನು ಬಿಟ್ಟರೆ ಗೋಹತ್ಯೆ ನಿಷೇಧ ಮಸೂದೆಗೆ ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ.

BSY Cows

ಇಷ್ಟೆಲ್ಲ ನಾಟಕ ಮಾಡಬೇಕೇ?: ಗೋಹತ್ಯೆಗೆ ನಿಷೇಧವಂತೆ, ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧ ಇಲ್ಲವಂತೆ. ಇಂತಹದ್ದೊಂದು ಎಡಬಿಡಂಗಿ ಕಾನೂನು ಮಾಡಲು ಇಷ್ಟೆಲ್ಲ ನಾಟಕ ಮಾಡಬೇಕೇ? ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮಾರಾಟ ಮಾಡಲು ಗೋಮಾಂಸವನ್ನು ಆಮದು ಮಾಡಿಕೊಳ್ತಿರಾ? ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ರೈತರು ಮಾತ್ರ ಅಲ್ಲ, ಚರ್ಮದ ಉತ್ಪನ್ನಗಳ ತಯಾರಿಕೆಗೆ ಚರ್ಮದ ಕೊರತೆ ಎದುರಾಗಲಿದ್ದು, ಉತ್ಪಾದನೆ ಕುಂಠಿತಗೊಳ್ಳಲಿದೆ. ಇದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಈ ಕಸುಬನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿವೆ.

COW SLAUGHTER BILL 5

ಗೋ ಶಾಲೆಗಳು ಎಷ್ಟಿವೆ?: ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದೆಲ್ಲ ಹೇಳುವವರು ಕನಿಷ್ಠ ದೇಶಕ್ಕೆಲ್ಲ ಅನ್ವಯವಾಗುವಂತಹ ಸಮಾನ ಗೋಹತ್ಯೆ ನಿಷೇಧ ಕಾನೂನು ತರಬಾರದೇಕೆ? ನಿಮಗೆ ತಾಕತ್ತಿದ್ದರೆ ಬಿಜೆಪಿ ಆಡಳಿತ ಇರುವ ಗೋವಾ, ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ. ಗೋಮಾಂಸ ರಫ್ತುಮಾಡುವುದನ್ನು ಸಂಪೂರ್ಣ ನಿಷೇಧಿಸಿ. ವಯಸ್ಸಾದ ಹಸುಗಳ ಪಾಲನೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ಹೊರಲಿದೆ ಎಂದು ಹೇಳಿದ್ದೀರಿ. ರಾಜ್ಯದಲ್ಲಿ ಎಷ್ಟು ಸರ್ಕಾರವೇ ನಡೆಸುತ್ತಿರುವ ಗೋಶಾಲೆಗಳಿವೆ? ಎಷ್ಟು ಹೊಸ ಗೋಶಾಲೆಗಳನ್ನು ತೆರೆಯಲಿದ್ದೀರಿ? ಇದಕ್ಕಾಗಿ ಎಷ್ಟು ಹಣ ಒದಗಿಸಿದ್ದೀರಿ? ಈ ವಿವರಗಳನ್ನು ಮೊದಲು ಬಹಿರಂಗಪಡಿಸಿ.

Share This Article
Leave a Comment

Leave a Reply

Your email address will not be published. Required fields are marked *