-ಗೂಸಾ ಕೊಟ್ಟ ಕುಟುಂಬದವರಿಗೆ ಚಾಕು ಇರಿದ
ಮಡಿಕೇರಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಚಾಕುವಿನಿಂದ ಇರಿದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಯನ್ನು ರಾಮದಾಸ್ ಎಂದು ಗುರುತಿಸಲಾಗಿದೆ. ವಿಲ್ಸನ್ ಎನ್ನುವವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಚೂರಿ ಇರಿತಕ್ಕೆ ಒಳಗಾದವರನ್ನು ವಿಲ್ಸನ್(45), ಸ್ಟೀಫನ್(28) ಮತ್ತು 17 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.
ಮಹಿಳೆಯರನ್ನು ಕೆಟ್ಟದೃಷ್ಟಿಯಿಂದ ನೋಡುತ್ತಿದ್ದ ಎಂಬ ಆರೋಪದ ಮೇಲೆ, ವಿಲ್ಸನ್ ಕುಟುಂಬದವರು ಕೆಲವು ತಿಂಗಳ ಹಿಂದೆ ರಾಮದಾಸ್‍ಗೆ ಗೂಸಾ ಕೊಟ್ಟಿದ್ದರಂತೆ. ಇದೇ ಜಿದ್ದು ಇಟ್ಟುಕೊಂಡಿದ್ದ ಪಾಪಿ ರಾಮದಾಸ್, ರಾತ್ರಿ ವಿಲ್ಸನ್ ಅವರ ಮನೆ ಬಳಿಗೆ ಹೋಗಿ ಮೂವರಿಗೂ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಆರೋಪಿ ರಾಮದಾಸ್ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಹಲ್ಲೆಗೊಳಗಾದ ವಿಲ್ಸನ್ ಮತ್ತು ಸ್ಟೀಫನ್ ಇಬ್ಬರ ಸ್ಥಿತಿ ಗಭೀರವಾಗಿದೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಮೂವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.