ಬೆಂಗಳೂರು: ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಅವರಿಗೆ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂದು ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿಯನ್ನು ಲಹರಿ ವೇಲು ಅವರು ಸ್ವೀಕರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ನಮ್ಮನ್ನಗಲಿದ ಖ್ಯಾತ ಗಾಯಕ ಎಸ್‍ಪಿಬಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಲಹರಿ ವೇಲು, ನನಗೆ ಈ ಪ್ರಶಸ್ತಿ ರಾಜ್ಯ ಪ್ರಶಸ್ತಿ ನೀಡಿದಷ್ಟು ಸಂತೋಷ ನೀಡಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಿಮಾಲಯ ಪರ್ವತ. ಅವರಿಗೆ ಅವರೇ ಸಾಟಿ, ನಮ್ಮ ಸಂಸ್ಥೆಯಲ್ಲಿ ಸುಮಾರು 14 ಸಾವಿರ ಹಾಡುಗಳನ್ನು ಹಾಡಿದ್ದಾರೆ ಎಂದು ಪ್ರಶಸ್ತಿ ಪಡೆದ ಸಂತಸವನ್ನು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ ಶಶಿಕುಮಾರ್, ನಟಿ ಪ್ರಿಯಾಂಕಾ ಉಪೇಂದ್ರ, ಸಾಹಿತಿ ಕೆ.ಕಲ್ಯಾಣ್, ಗಾಯಕಿ ಮಂಜುಳಾ ಗುರುರಾಜ್ ಸೇರಿದಂತೆ ಹಲವಾರು ಗಣ್ಯರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಪ್ರಶಸ್ತಿ ನೀಡಿ ಗೌರವಿಸಿದರು.