– ಮಾನಕ್ಕೆ ಹೆದರಿ ದೂರು ನೀಡಬೇಡವೆಂದು ಕುಟುಂಬ
– ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ
ಭೋಪಾಲ್: ಕಾಮುಕ ಪುತ್ರನೊಬ್ಬ ತನ್ನ ಮಲತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ನೀಚ ಕೃತ್ಯವೊಂದು ನಡೆದಿರುವುದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಭೋಪಾಲ್ ಮೂಲದ 24 ವರ್ಷದ ಮಹಿಳೆ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಳು. ಮೊದಲ ಪತ್ನಿ ಮೃತಪಟ್ಟಿದ್ದರಿಂದ ಆತನಿಗೆ ಅದು ಎರಡನೇ ಮದುವೆಯಾಗಿತ್ತು. ಮೊದಲ ಪತ್ನಿಯಲ್ಲಿ ಓರ್ವ ಮಗನಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ವ್ಯಕ್ತಿಯೇ ಸಾವನ್ನಪ್ಪಿದ್ದನು. ಹೀಗಾಗಿ ಕಾಮುಕ ಪುತ್ರ ಮಲತಾಯಿಯ ಜೊತೆ ವಾಸವಾಗಿದ್ದನು.
ಶುಕ್ರವಾರ ರಾತ್ರಿ ಸಂತ್ರಸ್ತೆ ತನ್ನ ಮಕ್ಕಳನ್ನು ಕೋಣೆಯಲ್ಲಿ ಮಲಗಿಸಿ, ಬೇರೊಂದು ಕೋಣೆಯಲ್ಲಿ ಮಲಗಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ಕಾಮುಕ ಪುತ್ರ ಏಕಾಏಕಿ ಆಕೆಯ ಕೋಣೆಯೊಳಗೆ ನುಗ್ಗಿ, ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.
ಪುತ್ರನ ವರ್ತನೆಯಿಂದ ಗಾಬರಿಗೊಂಡ ಸಂತ್ರಸ್ತೆ ಹೇಗೋ ಧೈರ್ಯ ಮಾಡಿ ತನ್ನ ಕುಟುಂಬಸ್ಥರ ಬಳಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಆದರೆ ಕುಟುಂಬ ಮಾತ್ರ ಮಾನಕ್ಕೆ ಅಂಜಿ ಯಾರಿಗೂ ಹೇಳಬೇಡ ಎಂದು ಕಿವಿಮಾತು ಹೇಳಿತು. ಇದರಿಂದ ಮತ್ತಷ್ಟು ಭಯಗೊಂಡ ಸಂತ್ರಸ್ತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾಳೆ.