ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

Public TV
3 Min Read
webinar

ಬೆಂಗಳೂರು: ವಿವಿಧ ಸಮುದಾಯಗಳು ನಿರ್ದಿಷ್ಟ ಹಬ್ಬ ಅಥವಾ ಋತುಮಾನಕ್ಕೆ ಅನುಗುಣವಾಗಿ ಆಚರಿಸುವ ಪಾರಂಪರಿಕ ಪದ್ಧತಿಗಳ ಹಿಂದೆ ಖಂಡಿತವಾಗಿಯೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಿರುತ್ತವೆ ಎಂದು ಯಲಹಂಕದ ಅಂತರ್ ಶಿಸ್ತೀಯ ಆರೋಗ್ಯವಿಜ್ಞಾನಗಳು ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಫುಲ್‍ಬ್ರೈಟ್ ಫೆಲೋ ಆಗಿರುವ ಹಿರಿಯ ವಿಜ್ಞಾನಿ ಡಾ.ಬಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಭಾರತೀಯ ವಿಜ್ಞಾನ ಮತ್ತು ಸಮೃದ್ಧ ಪರಂಪರೆ’ ಕುರಿತು ಸೋಮವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

maddale mara aati amavasye

`ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಅನೇಕ ಹಳ್ಳಿಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಅನುಸರಿಸುವ ಧಾರ್ಮಿಕ ಆಚರಣೆ ಅಥವಾ ಅಡುಗೆ ವಿಧಾನಗಳ ಹಿಂದೆ ಆರೋಗ್ಯ ಕಾಪಾಡಿಕೊಳ್ಳುವಂತಹ ರಹಸ್ಯ ಅಡಗಿದೆ. ಕರಾವಳಿಯ ತುಳು ಜನಾಂಗದವರು ಆಷಾಢ ಅಮಾವಾಸ್ಯೆಯ ದಿನ ಮದ್ದಾಲೆ ಮರದ ಎಲೆಯ ಕಷಾಯವನ್ನು ಆಟಿ ಕಷಾಯ ಎಂದು ಸೇವಿಸುತ್ತಾರೆ. ಅತಿಹೆಚ್ಚು ಮಳೆ ಬೀಳುವ ಆ ಪ್ರದೇಶದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲೇರಿಯಾ ಜ್ವರಕ್ಕೆ ಅದನ್ನು ಔಷಧವಾಗಿ ಬಳಸಲಾಗುತ್ತಿತ್ತು. ಮಲೇರಿಯಾಕ್ಕೆ ನೀಡಲಾಗುವ ಅಲೋಪತಿ ಔಷಧದಲ್ಲಿ ಇರುವ ರಾಸಾಯನಿಕ ಅಂಶಗಳು ಆ ಎಲೆಯಲ್ಲಿಯೂ ಇವೆ. ಅದನ್ನು ಹೇಗೋ ಕಂಡುಕೊಂಡ ಆ ಪ್ರದೇಶದ ಹಿರಿಯರು ಅದನ್ನು ಹಬ್ಬದ ಆಚರಣೆಯ ರೀತಿಯಲ್ಲಿ ಅನುಸರಿಸಿದರು.

Nelumbo nucifera nucifea0

ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ತಿಮ್ಮಪ್ಪನ ದೇವಾಲಯದಲ್ಲಿ ಪ್ರತಿವರ್ಷ ತಾವರೆ ಎಲೆಯಲ್ಲಿ ಪ್ರಸಾದ ಬಡಿಸಲಾಗುತ್ತಿದ್ದು, ನೂರಾರು ಜನ ಅಲ್ಲಿ ತಾವರೆ ಎಲೆಯಲ್ಲಿ ಪ್ರಸಾದ ಸೇವಿಸುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆ ಆ ಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು ಅದಕ್ಕೆ ಮದ್ದಾಗಿ ಇದನ್ನು ಬಳಕೆಗೆ ತರಲಾಯಿತು. ಕಾಲರಾ ಇಲ್ಲದಿದ್ದರೂ ಪ್ರತಿವರ್ಷ ಅದನ್ನು ಪಾರಂಪರಿಕವಾಗಿ ಆಚರಿಸಲಾಗುತ್ತಿದೆ. ಏಕಾದಶಿ ಉಪವಾಸದ ಮಾರನೇ ದಿನ ಅಗಸೆ ಸೊಪ್ಪನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಉಪವಾಸದಿಂದ ದೇಹದಲ್ಲಿ ಉತ್ಪತ್ತಿಯಾದ ಅತಿಯಾದ ಪಿತ್ತವನ್ನು ಅದು ಕಡಿಮೆ ಮಾಡುತ್ತದೆ’ ಎಂದು ಸೋಮಶೇಖರ್ ಅವರು ವಿವರಿಸಿದರು.

Srinivasa Ramanujan OPC 1

ಭಾರತದ ಪ್ರಸಿದ್ಧ ಗಣಿತಜ್ಞ `ಶ್ರೀನಿವಾಸ್ ರಾಮಾನುಜಮ್’ ಕುರಿತು ಮಾತನಾಡಿದ ಹಿರಿಯ ಡೇಟಾ ವಿಜ್ಞಾನಿ ಡಾ.ಉದಯ್ ಶಂಕರ್ ಪುರಾಣಿಕ್, ಈಗ ನಾವು ನಿತ್ಯ ಬಳಸುವ ಸ್ಕ್ಯಾನರ್, ಪ್ರಿಂಟರ್ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಶ್ರೀನಿವಾಸ್ ರಾಮಾನುಜಮ್ ಕಳೆದ ಶತಮಾನದಲ್ಲೇ ಮಂಡಿಸಿದ್ದ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ. ಮುಂದೊಂದು ದಿನ ಜಗತ್ತು ತಾಂತ್ರಿಕವಾಗಿ ಇಷ್ಟೊಂದು ಮುಂದುವರಿಯಲಿದೆ ಎಂಬ ಕಲ್ಪನೆ ರಾಮಾನುಜಮ್ ಅವರಿಗೆ ಇರಲಿಕ್ಕಿಲ್ಲ. ಆದರೆ ಅವರು ಮಂಡಿಸಿದ ಸೂತ್ರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಡಿಸೆಂಬರ್ 22 ಶ್ರೀನಿವಾಸ್ ರಾಮಾನುಜಮ್ ಹುಟ್ಟುಹಬ್ಬವಾಗಿರುವುದು ಒಂದು ವಿಶೇಷ.

`ವಿಜ್ಞಾನದ ತಾತ್ವಿಕತೆ’ ಕುರಿತು ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ವಿಶ್ವೇಶ ಗುತ್ತಲ್, ವೈಜ್ಞಾನಿಕ ಸೂತ್ರವೊಂದನ್ನು ಅಂತಿಮವಾಗಿ ಮಂಡಿಸುವ ಮುನ್ನ ಹೇಗೆ ನಿಷ್ಕರ್ಷೆ ಮಾಡಲಾಗುತ್ತದೆ ಎಂದು ವಿವರಿಸಿದರು. ಪ್ರಯೋಗ ಹಾಗೂ ಸತತ ವೀಕ್ಷಣೆಯ ಮೂಲಕ ಒಪ್ಪಿಕೊಳ್ಳಲು ಸಾಧ್ಯವಾದರೆ ಮಾತ್ರ ಅಂತಹ ಸೂತ್ರವನ್ನು ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಅಂಗೀಕರಿಸುತ್ತವೆ ಎಂದು ಗುತ್ತಲ್ ತಿಳಿಸಿದರು.

webinar

ಹಿರಿಯ ಪತ್ರಕರ್ತೆಯರಾದ ಎಂ.ಪಿ.ಸುಶೀಲ, ಕೆ.ಎಚ್.ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಯಲಿಗಾರ್ ಸಂವಾದದಲ್ಲಿ ಭಾಗಿಯಾದರು. ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಅಧಿಕಾರಿ ಕೆ.ವೈ.ಜಯಂತಿ, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಕಾರ್ಯದರ್ಶಿ ಮಾಲತಿ ಭಟ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ಚಿಂತಾಮಣಿ, ಪತ್ರಕರ್ತೆಯರಾದ ಉಷಾ ಕಟ್ಟೆಮನೆ, ವಾಣಿಶ್ರೀ ಪತ್ರಿ, ಚಿತ್ರಾ ಫಾಲ್ಗುಣಿ, ಅಕ್ಷರಾ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *